ನವದೆಹಲಿ, ಸೆ.15 (DaijiworldNews/AA): ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 10 ಮಹಾನಗರ ಪಾಲಿಕೆಗಳ ಪೈಕಿ ಜೈಪುರ, ಉದಯಪುರ, ಕೋಟಾ ಮತ್ತು ಭಿಲ್ವಾರ ಸೇರಿದಂತೆ ನಾಲ್ಕರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಒಟ್ಟಾರೆ 4,179 ವಾರ್ಡ್ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ 3,613 ವಾರ್ಡ್ಗಳನ್ನು ತನ್ನದಾಗಿಸಿಕೊಂಡಿದೆ.
ಬಿಕಾನೇರ್ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು, ಮಾಜಿ ಸಿಎಂ ವಸುಂಧರಾ ರಾಜೆ ಅವರ ಭದ್ರಕೋಟೆಯಾಗಿದ್ದ ಝಲಾವರ್ ಪುರಸಭೆಯಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಉಳಿದಂತೆ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 63, ಆಮ್ ಆದ್ಮಿ ಪಕ್ಷ 42, ಸಿಪಿಐ(ಎಂ) 38, ಬಿಎಸ್ಪಿ 19 ಹಾಗೂ ಭಾರತ ಆದಿವಾಸಿ ಪಾರ್ಟಿ 8 ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ರಾಜಸ್ಥಾನದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಇದು ಸುಳ್ಳಿನ ಕೂಗಿನ ವಿರುದ್ಧ ಸತ್ಯಕ್ಕೆ ಸಂದ ಜಯಕ್ಕೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.
"ಡಬಲ್ ಎಂಜಿನ್ ಸರ್ಕಾರದ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನೀತಿಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಇಲ್ಲಿನ ನನ್ನ ಕುಟುಂಬವು ಈ ಜನಾದೇಶದ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇದು ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಮಾತ್ರವಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಮೃದ್ಧಿಯನ್ನು ತರುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಸಂದರ್ಭದಲ್ಲಿ, ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ನಿಷ್ಠಾವಂತ ಮತ್ತು ಶ್ರಮಜೀವಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಪೋಸ್ಟ್ ಮಾಡಿದ್ದಾರೆ.