ಬೆಳಗಾವಿ, ಸೆ.15 (DaijiworldNews/AA): ಮುಂಬರುವ ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ಮಾಧ್ಯಮ ಮತ್ತು ಪ್ರಚಾರ ತಂತ್ರಗಾರಿಕೆಗಾಗಿ ನಾಲ್ವರು ಪ್ರಮುಖ ಸಂಯೋಜಕರನ್ನು ನೇಮಿಸಿದೆ. ಈ ಪೈಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಪಕ್ಷದ ಪರ ಸಮರ್ಥ ಮಾಧ್ಯಮ ನಿರ್ವಹಣೆ, ಪ್ರಚಾರ ತಂತ್ರ ಮತ್ತು ಸಂವಹನವನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ. ಮ್ಯಾಥ್ಯೂ ಆಂಟನಿ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಿದ್ದರೆ ಮೃಣಾಲ್ ಹೆಬ್ಬಾಳ್ಕರ್, ನಿಶಾಂತ್ ಆನಂದ್, ಅಲಿ ಮೆಹದಿ ಅವರನ್ನು ಸಂಯೋಜಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅಧಿಕೃತ ಆದೇಶ ಹೊರಡಿಸಿದ್ದಾರೆ.
ನೇಮಕಗೊಂಡಿರುವ ನಾಯಕರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಜೊತೆ ನಿಕಟ ಸಮನ್ವಯ ಸಾಧಿಸಿ, ಸಮಗ್ರ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಚಟುವಟಿಕೆಗಳ ಉಸ್ತುವಾರಿ ವಹಿಸಲಿದ್ದಾರೆ. ಈ ನೇಮಕದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮೃಣಾಲ್ ಅವರ ರಾಜಕೀಯ ಪಾತ್ರ ಮತ್ತಷ್ಟು ವಿಸ್ತಾರಗೊಂಡಿದೆ.