ಆಂಧ್ರ ಪ್ರದೇಶ, ಸೆ.15 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 23ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಜೀನೂ ಶ್ರೀ ಜಸ್ವಂತ್ ಚಂದ್ರ ಅವರ ಯಶೋಗಾಥೆ ಇದು.

ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ವಕಲಪೂಡಿ ಗ್ರಾಮದ ಮೂಲದ ಜಸ್ವಂತ್ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಕಾಕಿನಾಡದ ಆಶ್ರಮ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರು ಮೆರಿಟ್ ಸ್ಕಾಲರ್ಶಿಪ್ ಪಡೆದಿದ್ದರು. ಬಳಿಕ ಹೈದರಾಬಾದ್ನಲ್ಲಿ ಇಂಟರ್ಮೀಡಿಯೇಟ್ ಶಿಕ್ಷಣ ಪಡೆದರು. ಜೆಇಇಯಲ್ಲಿ 173ನೇ ರ್ಯಾಂಕ್ ಗಳಿಸಿದ ಅವರು ಐಐಟಿ ಕಾನ್ಪುರಕ್ಕೆ ಪ್ರವೇಶ ಪಡೆದು ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿದರು.
ಕ್ಯಾಂಪಸ್ ಪ್ಲೇಸ್ಮೆಂಟ್ ವೇಳೆ ಕಂಪನಿಯೊಂದಕ್ಕೆ ವಾರ್ಷಿಕ 50 ಲಕ್ಷಕ್ಕೂ ಅಧಿಕ ಪ್ಯಾಕೇಜ್ನ ಉದ್ಯೋಗಕ್ಕೆ ಆಯ್ಕೆಯಾದರು. ಆದರೆ ಅವರು ಕಾರ್ಪೊರೇಟ್ ಉದ್ಯೋಗದ ಆಫರ್ ತಿರಸ್ಕರಿಸಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2020ರಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಲು ನಿರ್ಧರಿಸಿದರು.
2020ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಜಸ್ವಂತ್ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. 2021ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಭಾರತೀಯ ಅಂಚೆ ಸೇವೆಗೆ ಆಯ್ಕೆಯಾಗುವಂತಹ ರ್ಯಾಂಕ್ ಗಳಿಸುತ್ತಾರೆ. 2022ರಲ್ಲಿ ಭಾರತೀಯ ರೈಲ್ವೆ ಮ್ಯಾನೇಜ್ಮೆಂಟ್ ಸೇವೆಗೆ ಪ್ರವೇಶ ಪಡೆದರು. ಇದೇ ವರ್ಷ ಐಎಫ್ಎಸ್ ಪರೀಕ್ಷೆಯಲ್ಲಿ 51ನೇ ರ್ಯಾಂಕ್ ಗಳಿಸಿದರು. 2023ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 162 ನೇ ರ್ಯಾಂಕ್ ಪಡೆದು ಐಪಿಎಸ್ ಗೆ ಆಯ್ಕೆಯಾದರು. ಬಳಿಕ ಹೈದರಾಬಾದ್ನಲ್ಲಿ ಐಪಿಎಸ್ ತರಬೇತಿಗೂ ಹಾಜರಾದರು.
ಆದರೆ ಜಸ್ವಂತ್ ಅವರಿಗೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಗುರಿ ಹೊಂದಿದ್ದರು. ಐಪಿಎಸ್ ತರಬೇತಿಯ ನಡುವೆಯೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರು. 2025 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 23ನೇ ರ್ಯಾಂಕ್ ಐಎಎಸ್ ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಜಸ್ವಂತ್ ಅವರ ಯುಪಿಎಸ್ಸಿ ಪಯಣ ಅನೇಕ ಅಭ್ಯರ್ಥಿಗಳಿಗೆ ಉದಾಹರಣೆಯಾಗಿದೆ.