ರಾಮನಗರ, ಸೆ.14 (DaijiworldNews/AA): ಈ ಬಾರಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದೇನೆ. ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕಡೆ ಪರಿಶೀಲನೆ ನಡೆಯುತ್ತಿದೆ. ಯಾರೂ ಆತುರ ಪಡುವುದು ಬೇಡ. ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ವಾರ 19,000ಕ್ಕೂ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಉಂಟಾಗಿತ್ತು. ರಾತ್ರಿ ವೇಳೆ ವಿದ್ಯುತ್ ಬಳಕೆ ಹೆಚ್ಚಾಗಿದೆ. ಈ ಸಂಬಂಧ ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಲು ಸಚಿವರಿಗೆ ಸೂಚಿಸಿರುವೆ" ಎಂದು ತಿಳಿಸಿದರು.
"ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡಿಲ್ಲ. ಜಾರ್ಜ್ ಅವರು ಸಚಿವರಾದ ಬಳಿಕ ಅನೇಕ ಯೋಜನೆ ರೂಪಿಸಿದ್ದು, ಕಲ್ಲಿದ್ದಲು ನಿಕ್ಷೇಪ ಇರುವ ಕಡೆಗಳಲ್ಲೇ ತುರ್ತಾಗಿ ಥರ್ಮಲ್ ಇಂಧನ ತಯಾರಿಕ ಘಟಕ ಸ್ಥಾಪಿಸಬೇಕು. ಒನ್ ನೇಷನ್ ಒನ್ ಗ್ರಿಡ್ ಮಾಡಲಾಗಿದ್ದು, ಎಲ್ಲೆ ವಿದ್ಯುತ್ ಉತ್ಪಾದನೆಯಾದರೂ ನಾವು ನಮ್ಮ ರಾಜ್ಯಕ್ಕೆ ತರಬಹುದು. ಇದಕ್ಕೆ ಸರಬರಾಜು ವೆಚ್ಚ ಬೀಳಲಿದೆ. ಈ ವಿಚಾರವಾಗಿ ಇಂಧನ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ" ಎಂದರು.
"ಬಿಜೆಪಿಯವರಿಗೆ ರಾಜಕಾರಣವೇ ಹೆಚ್ಚಾಗಿದೆ. ರೈತರ ವಿಚಾರ ಚರ್ಚೆ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ನಮ್ಮ ಶಾಸಕರ ಜೊತೆಗೆ ಬಿಜೆಪಿ ಶಾಸಕರು ಕೂಡ ಬೇಸರ ವ್ಯಕ್ತಪಡಿಸಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಗೆ 21ರಿಂದ 23ರ ವರೆಗೆ ಅಧಿವೇಶನ ಕರೆಯಲಾಗಿದೆ. ಶಾಸಕರು ಗಾಬರಿ ಆಗುವುದು ಬೇಡ. ರಾಜಕಾರಣ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಬರುತ್ತಿದ್ದು, ವಿದ್ಯುತ್, ನೀರು, ಭೂಮಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ" ಎಂದು ಹೇಳಿದರು.