ಮುಂಬೈ, ಸೆ.14 (DaijiworldNews/TA): ಭದ್ರತಾ ಸಿಬ್ಬಂದಿ, ಐಷಾರಾಮಿ ಕಾರು ಹಾಗೂ ದುಬಾರಿ ವಸ್ತುಗಳನ್ನು ಬದಿಗಿಟ್ಟು ಕೋಟ್ಯಧಿಪತಿ ಬಿಜೆಪಿ ಶಾಸಕರೊಬ್ಬರು ಭಿಕ್ಷುಕನ ವೇಷ ಧರಿಸಿ ದಿನವಿಡೀ ರಸ್ತೆಯಲ್ಲಿ ಭಿಕ್ಷೆ ಬೇಡಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಘಾಟ್ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಉದ್ಯಮಿ ಪರಾಗ್ ಶಾ ಅವರೇ ಈ ವಿಭಿನ್ನ ಪ್ರಯೋಗ ನಡೆಸಿದ್ದು, ಇದೀಗ ಈ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸುಮಾರು ರೂ. 5 ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎನ್ನಲಾಗಿರುವ ಪರಾಗ್ ಶಾ ಅವರು ಜೈನ ಧರ್ಮದ ಚಾತುರ್ಮಾಸದ ಹಿನ್ನೆಲೆಯಲ್ಲಿ ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಈ ಅನುಭವ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.
ಪರಾಗ್ ಶಾ ಅವರು ಮುಖಕ್ಕೆ ವಿಶೇಷ ಮೇಕಪ್ ಮಾಡಿಸಿಕೊಂಡು, ಹರಿದ ಹಾಗೂ ಸರಳ ಬಟ್ಟೆಗಳನ್ನು ಧರಿಸಿ ಸಂಪೂರ್ಣವಾಗಿ ಭಿಕ್ಷುಕನ ರೂಪ ತಾಳಿದ್ದರು. ಬಳಿಕ ಘಾಟ್ಕೋಪರ್ನ ರಸ್ತೆಗಳಲ್ಲಿ ದಿನವಿಡೀ ಭಿಕ್ಷೆ ಬೇಡುತ್ತಾ ಓಡಾಡಿದ್ದಾರೆ. ವಿಶೇಷವೆಂದರೆ, ತಮ್ಮದೇ ಕ್ಷೇತ್ರದಲ್ಲಿ ಭಿಕ್ಷುಕನ ವೇಷದಲ್ಲಿ ಸಂಚರಿಸಿದರೂ ಸ್ಥಳೀಯರು ಅಥವಾ ಪರಿಚಯಸ್ಥರಿಗೆ ಅವರು ಶಾಸಕ ಪರಾಗ್ ಶಾ ಎಂಬುದು ತಿಳಿಯಲಿಲ್ಲ ಎನ್ನಲಾಗಿದೆ.
ಭಿಕ್ಷುಕನ ವೇಷದಲ್ಲಿದ್ದ ವೇಳೆ ಸಾರ್ವಜನಿಕರು ನೀಡಿದ ಹಣ ಹಾಗೂ ಆಹಾರವನ್ನೇ ಸ್ವೀಕರಿಸಿ ದಿನ ಕಳೆದಿದ್ದಾರೆ. ಈ ಮೂಲಕ ಸಾಮಾನ್ಯ ಭಿಕ್ಷುಕರು ಎದುರಿಸುವ ಕಷ್ಟಗಳು, ಸವಾಲುಗಳು ಹಾಗೂ ಸಾರ್ವಜನಿಕರ ವರ್ತನೆಯನ್ನು ನೇರವಾಗಿ ಅನುಭವಿಸಲು ಅವರು ಪ್ರಯತ್ನಿಸಿದ್ದಾರೆ. ಒಂದು ದಿನದ ಈ ವಿಭಿನ್ನ ಅನುಭವ ಮುಗಿದ ಬಳಿಕ ಪರಾಗ್ ಶಾ ಅವರು ಮೇಕಪ್ ತೆಗೆದು ತಮ್ಮ ಸಾಮಾನ್ಯ ರೂಪಕ್ಕೆ ಮರಳಿದ್ದಾರೆ. ಬಳಿಕ ರಸ್ತೆಯಲ್ಲಿ ಭಿಕ್ಷುಕನಾಗಿ ಕಳೆದ ಸಮಯದಲ್ಲಿ ತಮಗಾದ ಅನುಭವಗಳನ್ನು ಧರ್ಮಗುರುಗಳು ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಕೋಟ್ಯಧಿಪತಿ ಶಾಸಕ ರಸ್ತೆಯಲ್ಲಿ ಭಿಕ್ಷುಕನ ವೇಷದಲ್ಲಿ ಭಿಕ್ಷೆ ಬೇಡುತ್ತಿರುವ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಈ ವಿಭಿನ್ನ ಪ್ರಯೋಗದ ಬಗ್ಗೆ ನೆಟ್ಟಿಗರು ಹಾಗೂ ಶಾಸಕರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.