ಹಾಸನ, ಸೆ.14 (DaijiworldNews/TA): ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಯುವಕನೊಬ್ಬ ಶಾಸಕರಿಗೆ ಮನವಿ ಸಲ್ಲಿಸಿರುವ ಅಚ್ಚರಿಯ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದಿದೆ.

ಸೆಪ್ಟೆಂಬರ್ 12ರಂದು ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಆಲದಹಳ್ಳಿ ಗ್ರಾಮದ ಸಂತೋಷ್ ಎಂಬ ಯುವಕ ತನ್ನ ಮದುವೆಗೆ ಹುಡುಗಿ ಹುಡುಕಿಕೊಡುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ. ಎಂಬಿಎ ಪದವೀಧರನಾಗಿರುವ ಸಂತೋಷ್, ತಾನು ರೈತನ ಮಗ ಎಂಬ ಕಾರಣಕ್ಕೆ ಯುವತಿಯರು ಮದುವೆಗೆ ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ತಮ್ಮ ಬಳಿ ಮನೆ, ಆಸ್ತಿ ಹಾಗೂ ಸ್ವಂತ ಅಂಗಡಿ ಇದ್ದರೂ ಇದುವರೆಗೆ 30ಕ್ಕೂ ಹೆಚ್ಚು ಯುವತಿಯರನ್ನು ನೋಡಲಾಗಿದೆ. ಆದರೆ ಯಾರೊಬ್ಬರೂ ಮದುವೆಗೆ ಒಪ್ಪಿಕೊಂಡಿಲ್ಲ ಎಂದು ಅವರು ಶಾಸಕರ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಅಪ್ಪ-ಅಮ್ಮ ಇಲ್ಲದ ಕಾರಣ ತಮಗೆ ಸೂಕ್ತವಾದ ಹುಡುಗಿಯನ್ನು ಹುಡುಕಿಕೊಟ್ಟು ಮದುವೆ ಮಾಡಿಸುವಂತೆ ಸಂತೋಷ್ ಮನವಿ ಮಾಡಿದ್ದಾರೆ. ಯುವಕನ ಈ ಮನವಿಯನ್ನು ಕೇಳಿ ಅಲ್ಲಿದ್ದ ಶಾಸಕರು ಸೇರಿದಂತೆ ಹಲವರು ಅಚ್ಚರಿಗೊಳಗಾದರು.
ಯುವಕನ ಮನವಿಯನ್ನು ಆಲಿಸಿದ ಶಾಸಕ ಎ. ಮಂಜು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮದುವೆಯಾಗದೆ ಇರುವ ಅನೇಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ ಅವರು, ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಂತೆ ಸಲಹೆ ನೀಡಿದ್ದಾರೆ. ಅಲ್ಲದೆ, “ನೀನೇ ಯಾರನ್ನಾದರೂ ಪ್ರೀತಿಸಿ ಮದುವೆಯಾಗು” ಎಂದು ಸಂತೋಷ್ಗೆ ಸಲಹೆ ನೀಡಿ ಕಳುಹಿಸಿದ್ದಾರೆ. ಮದುವೆಗಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಳಿ ವಿವಿಧ ರೀತಿಯ ಮನವಿಗಳು ಬರುತ್ತಿರುವುದು ಸಾಮಾನ್ಯ. ಆದರೆ ‘ಹುಡುಗಿ ಸಿಗುತ್ತಿಲ್ಲ, ಮದುವೆ ಮಾಡಿಸಿ’ ಎಂಬ ಯುವಕನ ಮನವಿ ಇದೀಗ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.