ಬೆಂಗಳೂರು, ಸೆ.14 (DaijiworldNews/TA): ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಪಡಿತರ ಪಡೆಯಲು ಪ್ರತಿ ತಿಂಗಳು ಫಲಾನುಭವಿಗಳು ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಆದರೆ ವಯಸ್ಸಾದವರು ಹಾಗೂ ವಿವಿಧ ಕಾರಣಗಳಿಂದ ಬೆರಳಚ್ಚು ನೀಡಲು ಸಾಧ್ಯವಾಗದವರಿಗೆ ಇದೀಗ ಸರ್ಕಾರ ವಿನಾಯಿತಿ ನೀಡಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 75 ವರ್ಷ ಮೇಲ್ಪಟ್ಟ ವಯೋವೃದ್ಧ ಬಿಪಿಎಲ್ ಪಡಿತರದಾರರಿಗೆ ಬೆರಳಚ್ಚಿನಿಂದ ವಿನಾಯಿತಿ ನೀಡುವ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಯಾರಿಗೆ ಬೆರಳಚ್ಚಿನಿಂದ ವಿನಾಯಿತಿ? : ವಯಸ್ಸಾದವರು, ಅನಾರೋಗ್ಯದಿಂದ ಹಾಸಿಗೆ ಹಿಡಿದವರು ಹಾಗೂ ಬೆರಳಚ್ಚು ಪಡೆಯಲು ಸಾಧ್ಯವಾಗದ ಇತರ ಫಲಾನುಭವಿಗಳಿಗೆ ಕಣ್ಣಿನ ಚಹರೆ (ಐರಿಸ್) ಆಧಾರದಲ್ಲಿ ಪಡಿತರ ವಿತರಿಸುವ ವ್ಯವಸ್ಥೆ ಜಾರಿಗೆ ತರಲು ಇಲಾಖೆ ಚಿಂತನೆ ನಡೆಸಿದೆ. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ಶೇ.2ರಷ್ಟು ಫಲಾನುಭವಿಗಳನ್ನು ಬೆರಳಚ್ಚು ವಿನಾಯಿತಿ ಪಟ್ಟಿಗೆ ಸೇರಿಸಲು ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅನ್ನಭಾಗ್ಯ ಯೋಜನೆಯಡಿ ಉಚಿತ ಪಡಿತರ ಪಡೆಯಲು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಆದರೆ ವಯಸ್ಸಾದವರ ಬೆರಳಿನ ರೇಖೆಗಳು ಸವೆದು ಹೋಗಿರುವುದರಿಂದ ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರದಲ್ಲಿ ಬೆರಳಚ್ಚು ದಾಖಲಾಗುವುದಿಲ್ಲ. ಅದೇ ರೀತಿ, ದೈಹಿಕ ಶ್ರಮದ ಕೆಲಸ ಮಾಡುವವರ ಬೆರಳಿನ ರೇಖೆಗಳು ಸವೆಯುವುದರಿಂದಲೂ ಬೆರಳಚ್ಚು ಗುರುತಿಸಲು ಸಮಸ್ಯೆಯಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾದ ಸಂದರ್ಭದಲ್ಲೂ ಬಯೋಮೆಟ್ರಿಕ್ ದೃಢೀಕರಣ ವಿಫಲವಾಗುತ್ತಿರುವುದು ಫಲಾನುಭವಿಗಳು ಹಾಗೂ ಪಡಿತರ ವಿತರಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಬೆರಳಚ್ಚಿನಿಂದ ವಿನಾಯಿತಿ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ.
75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಬ್ಬಂಟಿ ಹಿರಿಯ ನಾಗರಿಕರಿಗೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ‘ಅನ್ನ ಸುವಿಧಾ’ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಈ ಯೋಜನೆಯ ಪ್ರಯೋಜನ ಪಡೆಯಲು ಒಬ್ಬಂಟಿ ಹಿರಿಯ ನಾಗರಿಕರು ‘ಹೋಮ್ ಡೆಲಿವರಿ ಆ್ಯಪ್’ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಮುಂದೆ ಈ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
‘ಅನ್ನ ಸುವಿಧಾ’ ಯೋಜನೆಯಡಿ ಅರ್ಹರಾಗಿರುವ 75 ವರ್ಷ ಮೇಲ್ಪಟ್ಟ ಒಬ್ಬಂಟಿ ಹಿರಿಯ ನಾಗರಿಕರಿಗೆ ಸಮೀಪದ ನ್ಯಾಯಬೆಲೆ ಅಂಗಡಿಯವರು ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಈ ಸೇವೆ ಒದಗಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ರೂ.50 ಪಾವತಿಸಲಾಗುತ್ತದೆ. ಮನೆ ಬಾಗಿಲಿಗೆ ಪಡಿತರ ವಿತರಣೆ ಸೇವೆ ಪಡೆಯಲು ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ವಯೋವೃದ್ಧರು ಪಡಿತರ ಪಡೆಯಲು ಎದುರಿಸುತ್ತಿರುವ ಬೆರಳಚ್ಚಿನ ಸಮಸ್ಯೆ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮಗಳು ಸಹಕಾರಿಯಾಗುವ ನಿರೀಕ್ಷೆಯಿದೆ.