ತೆಲಂಗಾಣ, ಸೆ.14 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2023ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 3 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಅನನ್ಯಾ ರೆಡ್ಡಿ ಅವರ ಯಶೋಗಾಥೆ ಇದು.

ಅನನ್ಯಾ ರೆಡ್ಡಿ ಅವರು ತೆಲಂಗಾಣದ ಮಹಾಬೂಬ್ನಗರ ಜಿಲ್ಲೆಯ ಅಡ್ಡಕುಲ ಮಂಡಲದ ಪೊನ್ನಕಲ ಗ್ರಾಮದವರು. ಅನನ್ಯಾ ಅವರ ತಂದೆ ಸುರೇಶ್ ರೆಡ್ಡಿ ಉದ್ಯಮಿಯಾಗಿದ್ದರೆ, ತಾಯಿ ಮಂಜುಲತಾ ಗೃಹಿಣಿ. ಅನನ್ಯಾ ತಮ್ಮ 10 ನೇ ತರಗತಿಯವರೆಗೆ ಮಹಾಬೂಬ್ನಗರದ ಗೀತಂ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ಹೈದರಾಬಾದ್ನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಬಾಲ್ಯದಿಂದಲೂ ಸಮಾಜಸೇವೆ ಮಾಡುವ ಹಂಬಲ ಹೊಂದಿದ್ದ ಅನನ್ಯಾ, ಪಿಯುಸಿ ಹಂತದಲ್ಲೇ ಯುಪಿಎಸ್ಸಿಗೆ ಸಿದ್ಧತೆ ನಡೆಸಲು ನಿರ್ಧರಿಸಿದರು. ದೆಹಲಿಯಲ್ಲಿಯೇ ನೆಲೆಸಿ ಪದವಿಯ ಜೊತೆಗೆ ಯುಪಿಎಸ್ಸಿ ಸಿದ್ಧತೆಯನ್ನು ಮುಂದುವರಿಸಿದರು. ದೆಹಲಿಯ ಪ್ರಸಿದ್ಧ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಭೌಗೋಳಿಕತೆಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಪದವಿ ಪಡೆದರು.
ಪದವಿ ಮುಗಿದ ಕೂಡಲೇ ಸಂಪೂರ್ಣವಾಗಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಆರಂಭವಿಸಿದರು. ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಅನನ್ಯಾ ಅವರು ಯುಪಿಎಸ್ಸಿಯಲ್ಲಿ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. 2023 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅನನ್ಯಾ ಅವರು 3ನೇ ರ್ಯಾಂಕ್ ಪಡೆದರು. ಈ ಮೂಲಕ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.