ಪಣಜಿ, ಸೆ.13 (DaijiworldNews/AA): 2027 ರಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ಭಾನುವಾರ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದೆ.

ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಜಿಎಫ್ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮೈತ್ರಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ಒಕ್ಕೂಟಕ್ಕೆ ಗೋವಾ ಫಸ್ಟ್ ಎಂದು ಹೆಸರಿಡಲಾಗಿದೆ.
"ಈ ಮೂಲಕ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿದ ಮೂರನೇ ರಾಜಕೀಯ ಪರ್ಯಾಯವನ್ನು ಜನರ ಮುಂದಿಡಲಾಗಿದೆ. ಇಲ್ಲಿಯವರೆಗೆ ಗೋವಾದ ಜನರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ಬೇರೆ ನೈಜ ಆಯ್ಕೆ ಇರಲಿಲ್ಲ. ಗೋವಾ ಫಸ್ಟ್ ಆ ಕೊರತೆಯನ್ನು ನೀಗಿಸಲಿದ್ದು, ಬಲಿಷ್ಠ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸಲಿದೆ. ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ ಇಲ್ಲ, ಇನ್ನೊಂದೆಡೆ ಗೆದ್ದ ಕಾಂಗ್ರೆಸ್ ಶಾಸಕರು ಮತ್ತೆ ಬಿಜೆಪಿಗೆ ಜಿಗಿಯುವ ಸಾಧ್ಯತೆಯಿದೆ. ಆದ್ದರಿಂದ ನಮ್ಮ ಮೈತ್ರಿಕೂಟ ಸ್ವಂತ ಬಲದ ಮೇಲೆ ಗೆದ್ದು ಗೋವಾದ ಜನರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ರಚಿಸಲಿದೆ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.