ಬಳ್ಳಾರಿ, ಸೆ. 13 (DaijiworldNews/TA): ಕುಟುಂಬ ಕಲಹದಿಂದ ನೊಂದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಎದುರಿನ ವಿದ್ಯುತ್ ಟ್ರಾನ್ಸ್ಫಾರ್ಮರ್ ಏರಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬ್ರೂಸ್ಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಈ ನಾಟಕೀಯ ಘಟನೆ ನಡೆದಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಕೆಲಕಾಲ ದಿಗ್ಭ್ರಮೆಗೊಂಡರು.

ಮುಂಡರಗಿ ಪ್ರದೇಶದ ನಿವಾಸಿ ಇಸ್ಮಾಯಿಲ್ ಎಂಬವರು ತಮ್ಮ ಪತ್ನಿಯೊಂದಿಗೆ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ. ಠಾಣೆಯಲ್ಲಿ ಪತ್ನಿಯೊಂದಿಗೆ ವಾಗ್ವಾದ ನಡೆದ ಬಳಿಕ ಇಸ್ಮಾಯಿಲ್ ಅಸಮಾಧಾನಗೊಂಡು ಹೊರಗೆ ಓಡಿ ಬಂದು, ಠಾಣೆಯ ಎದುರಿನ ವಿದ್ಯುತ್ ಟ್ರಾನ್ಸ್ಫಾರ್ಮರ್ ಏರಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಪರಿಸ್ಥಿತಿ ಅಪಾಯಕಾರಿಯಾಗುತ್ತಿದ್ದಂತೆ ಪೊಲೀಸರು ಇಸ್ಮಾಯಿಲ್ ಅವರನ್ನು ಸಮಾಧಾನಪಡಿಸಿ, ಸುರಕ್ಷಿತವಾಗಿ ಕೆಳಗಿಳಿಯುವಂತೆ ಮನವೊಲಿಸಲು ಮುಂದಾಗಿದ್ದಾರೆ.
ಪೊಲೀಸರು ಸತತವಾಗಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದು, ಕೊನೆಗೆ ಇಸ್ಮಾಯಿಲ್ ಟ್ರಾನ್ಸ್ಫಾರ್ಮರ್ನಿಂದ ಸುರಕ್ಷಿತವಾಗಿ ಕೆಳಗಿಳಿಯಲು ಒಪ್ಪಿಕೊಂಡಿದ್ದಾರೆ. ಇದರಿಂದ ಕೆಲಕಾಲ ಉಂಟಾಗಿದ್ದ ಆತಂಕದ ಪರಿಸ್ಥಿತಿ ಅಂತ್ಯಗೊಂಡಿದೆ. ಇಡೀ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಗೆ ನಿಖರ ಕಾರಣ ಹಾಗೂ ಇತರೆ ವಿವರಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.