ಲಕ್ನೋ, ಆ. 31 (DaijiworldNews/AA): ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ 11 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ ಸಂಪೂರ್ಣವಾಗಿ ನೆಲಸಮವಾಗಿದೆ. ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಕೌಶಂಬಿ ಜಿಲ್ಲಾಧಾಕಾರಿ ಅಮಿತ್ ಕುಮಾರ್ ಪಾಲ್ ತಿಳಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ. ಭಯೋತ್ಪಾದನಾ ನಿಗ್ರಹ ದಳವು ಸಹ ಸ್ಥಳಕ್ಕೆ ಆಗಮಿಸಿದ್ದು, ಸ್ಫೋಟಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಸಾವುನೋವುಗಳು ಮತ್ತು ಗಾಯಗೊಂಡವರ ಅಂತಿಮ ಸಂಖ್ಯೆಯನ್ನು ಖಚಿತಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಸ್ಫೋಟ ಸಂಭವಿಸಿದಾಗ ಕಾರ್ಖಾನೆಯಲ್ಲಿ ಸುಮಾರು 25 ಕಾರ್ಮಿಕರಿದ್ದರು. ಸದ್ಯ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಮತ್ತು ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಿಸಲಾಗುತ್ತಿದೆ.