ನವದೆಹಲಿ, ಆ. 31 (DaijiworldNews/AK):ದೇಶಾದ್ಯಂತ ಪೆಟ್ರೋಲ್ ಬಂಕ್ಗಳ ಇಂಧನ ವಿತರಣಾ ನಳಿಕೆಗಳ ಮೇಲೆ ಹಾಗೂ ಗ್ರಾಹಕರಿಗೆ ನೀಡುವ ಬಿಲ್, ರಶೀದಿಗಳಲ್ಲಿ ಪೆಟ್ರೋಲ್ನಲ್ಲಿ ಮಿಶ್ರಣ ಮಾಡಲಾದ ಎಥೆನಾಲ್ನ ನಿಖರ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದು, ಅರ್ಜಿದಾರ ವಕೀಲ ಎನ್.ಕೆ. ಗೋಸ್ವಾಮಿ ಅವರಿಗೆ ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿತು.
ವಿಚಾರಣೆ ವೇಳೆ ಪೆಟ್ರೋಲ್ ರಶೀದಿಯನ್ನು ಪ್ರದರ್ಶಿಸಿದ ವಕೀಲ ಗೋಸ್ವಾಮಿ, “ರಶೀದಿಯಲ್ಲಿ ಎಥೆನಾಲ್ ಪ್ರಮಾಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ತಾವು ಹಣ ಕೊಟ್ಟು ಖರೀದಿಸುತ್ತಿರುವ ಇಂಧನದ ನೈಜ ಸಂಯೋಜನೆಯನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ಭಾರತದ ಪ್ರತಿಯೊಬ್ಬ ನಾಗರಿಕನಿಗಿದೆ” ಎಂದು ವಾದಿಸಿದರು.