ನವದೆಹಲಿ, ಆ. 31 (DaijiworldNews/AA): ಉತ್ತರ ಪ್ರದೇಶದ 16 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಾಲಕಿಯನ್ನು ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಆಗಸ್ಟ್ 4ರ ರಾತ್ರಿ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಕುಲದೀಪ್ ಹಾಗೂ ಕಂಡಕ್ಟರ್ ಸಂದೀಪ್ನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ನಿವಾಸಿಯಾಗಿದ್ದು, 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಗಸ್ಟ್ 4ರಂದು ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಬಾಲಕಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಳು. ನೋಯ್ಡಾದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಲು ಆಕೆ ತೆರಳುತ್ತಿದ್ದಳು. ಭಾರಿ ಮಳೆ ಹಾಗೂ ಕತ್ತಲಿನ ಕಾರಣದಿಂದಾಗಿ ದಾರಿ ತಪ್ಪಿದ ಬಾಲಕಿ ತಪ್ಪಾಗಿ ಪರಿಚೌಕ್ನಲ್ಲಿ ಇಳಿದಿದ್ದಳು ಎಂದು ತಿಳಿದುಬಂದಿದೆ.
ಈ ವೇಳೆ ಖಾಲಿ ಸ್ಲೀಪರ್ ಬಸ್ವೊಂದು ಅಲ್ಲಿಂದ ಸಾಗುತ್ತಿತ್ತು. ಭಾರಿ ಮಳೆಯಲ್ಲಿ ಸಿಲುಕಿದ್ದ ಬಾಲಕಿ ಸಹಾಯಕ್ಕಾಗಿ ಬಸ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾಳೆ. ಚಾಲಕ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ, ಅದು ನೋಯ್ಡಾ ಸೆಕ್ಟರ್-63ಕ್ಕೆ ತೆರಳುತ್ತಿದೆ ಎಂದು ಹೇಳಿ ಆಕೆಯನ್ನು ಬಸ್ಗೆ ಹತ್ತಿಸಿಕೊಂಡಿದ್ದಾರೆ. ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ಕಂಡಕ್ಟರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.