ಲಖನೌ, ಆ. 31 (DaijiworldNews/AA): ಪ್ರಸಿದ್ಧ ಹರಿಯಾಣಿ ಗಾಯಕ ಮತ್ತು ಯೂಟ್ಯೂಬರ್ ಅಂಕಿತ್ ಬಾಲ್ಯನ್ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಶೂಟರ್ಗಳನ್ನು ಸೋಮವಾರ ಮುಂಜಾನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.

ಮೋಹಿತ್ (22) ಮತ್ತು ಸುಮಿತ್ (24) ಪೊಲೀಸ್ ಎನ್ಕೌಂಟರ್ ನಲ್ಲಿ ಹತ್ಯೆಯಾದ ಆರೋಪಿಗಳು.
ಕೈರಾನಾ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋದಾಮಿನ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಪ್ರತಿದಾಳಿ ಗುಂಡಿನ ಚಕಮಕಿಯಲ್ಲಿ ಇಬ್ಬರೂ ಗಾಯಗೊಂಡಿದ್ದರು. ಗಾಯಗೊಂಡ ಆರೋಪಿಗಳನ್ನು ಶಾಮ್ಲಿಯ ಜಿಲ್ಲಾ ಸಂಯುಕ್ತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 26ರ ಸಂಜೆ ಶಾಮ್ಲಿಯ ಕೊತ್ವಾಲಿ ಪ್ರದೇಶದಲ್ಲಿರುವ ಜಿಮ್ನಿಂದ ಅಂಕಿತ್ ಬಾಲ್ಯನ್ ಹೊರಬರುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.