ನವದೆಹಲಿ, ಆ. 31 (DaijiworldNews/AA): ಸಾಧಿಸುವ ಛಲ, ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಯಾವುದೇ ಅಡೆತಡೆ ದೊಡ್ಡದಲ್ಲ. ಕಠಿಣ ಸವಾಲುಗಳನ್ನೂ ಮೆಟ್ಟಿ ನಿಂತು ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಸತ್ಯಂ ಕುಮಾರ್ ಅವರ ಪಯಣ ಉತ್ತಮ ಉದಾಹರಣೆಯಾಗಿದೆ.

ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಸತ್ಯಂ ಕುಮಾರ್ ಇಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯೊಂದರಲ್ಲಿ ಮಷಿನ್ ಲರ್ನಿಂಗ್ ಸಿಸ್ಟಮ್ಸ್ ರಿಸರ್ಚ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಸವಾಲುಗಳನ್ನು ಎದುರಿಸಿ ಈ ಹಂತ ತಲುಪಿರುವ ಅವರ ಪಯಣ ನಿಜಕ್ಕೂ ಗಮನಾರ್ಹವಾಗಿದೆ.
ಬಿಹಾರದ ಭೋಜ್ಪುರ ಜಿಲ್ಲೆಯ ಬಖೋರಾಪುರ ಗ್ರಾಮದ ಕೃಷಿಕ ಕುಟುಂಬದಲ್ಲಿ ಸತ್ಯಂ ಕುಮಾರ್ ಅವರು 1999ರ ಜುಲೈ 20ರಂದು ಜನಿಸಿದರು. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಬಾಲ್ಯದಿಂದಲೇ ಕೃಷಿ ಕೆಲಸಗಳ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನೂ ಮುಂದುವರಿಸಬೇಕಾಗಿತ್ತು. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಐಟಿ-ಜೆಇಇ ಪರೀಕ್ಷೆಯನ್ನು ಕೇವಲ 12ನೇ ವಯಸ್ಸಿನಲ್ಲಿ ಉತ್ತೀರ್ಣಗೊಳ್ಳುವ ಮೂಲಕ 'ಅತಿ ಕಿರಿಯ ಐಐಟಿಯನ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಸುದ್ದಿಯಾಗಿದ್ದರು.
ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಸತ್ಯಂ ಅವರ ಆಸಕ್ತಿಯನ್ನು ಗುರುತಿಸಿದ ಪೋಷಕರು ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಐಐಟಿ-ಜೆಇಇ ಪರೀಕ್ಷೆಗೆ ತಯಾರಿ ನಡೆಸಲು ಅವರನ್ನು ರಾಜಸ್ಥಾನದ ಕೋಟಾಗೆ ಕಳುಹಿಸಿದರು. ಪೋಷಕರ ಪರಿಶ್ರಮಕ್ಕೆ ತಕ್ಕ ಫಲ ದೊರೆಯಿತು. 13ನೇ ವಯಸ್ಸಿನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದ ಸತ್ಯಂ, ಅಖಿಲ ಭಾರತ ಮಟ್ಟದಲ್ಲಿ 670ನೇ ರ್ಯಾಂಕ್ ಗಳಿಸಿದರು.
2013ರಲ್ಲಿ ಸತ್ಯಂ ಅವರು ಪ್ರತಿಷ್ಠಿತ ಐಐಟಿ ಕಾನ್ಪುರದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಪಡೆದರು. ಅಲ್ಲಿಂದ ಬಿ.ಟೆಕ್ ಹಾಗೂ ಎಂ.ಟೆಕ್ ಪದವಿಗಳನ್ನು ಪೂರ್ಣಗೊಳಿಸಿದರು. ಈ ಅವಧಿಯಲ್ಲಿ ರೋಬೋಟಿಕ್ಸ್ ಹಾಗೂ ಮಷಿನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡ ಅವರು, 2019ರಲ್ಲಿ ಅಮೆರಿಕಕ್ಕೆ ತೆರಳಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ವ್ಯಾಸಂಗ ಆರಂಭಿಸಿದರು.
ಐಐಟಿ ಕಾನ್ಪುರದಲ್ಲಿ ನಡೆದ 'ಟೆಕ್ಕ್ರಿಟಿ 2014' ಕಾರ್ಯಕ್ರಮದಲ್ಲಿ ಭೂಮಿ ಮತ್ತು ನೀರು ಎರಡರ ಮೇಲೂ ಕಾರ್ಯನಿರ್ವಹಿಸಬಲ್ಲ ಉಭಯಚರ ರೋಬೋಟಿಕ್ಸ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿ ಸತ್ಯಂ ರನ್ನರ್ಅಪ್ ಆಗಿದ್ದರು. ಅವರ ಶೈಕ್ಷಣಿಕ ಸಾಧನೆಗೆ 2016ರಲ್ಲಿ ಫ್ರಾನ್ಸ್ನ 'ಎಕ್ಸಲೆನ್ಸ್ ಚಾರ್ಪಾಕ್ ಸಮ್ಮರ್ ಟ್ರೈನಿಂಗ್ ಸ್ಕಾಲರ್ಶಿಪ್' ದೊರೆಯಿತು. 2017ರಲ್ಲಿ ಭಾರತ ಸರ್ಕಾರದ ಟೀಚಿಂಗ್ ಅಸಿಸ್ಟೆಂಟ್ ಫೆಲೋಶಿಪ್ ಕೂಡ ಪಡೆದರು.
2024ರಲ್ಲಿ ಯಶಸ್ವಿಯಾಗಿ ಪಿಹೆಚ್ಡಿ ಪ್ರಬಂಧ ಸಲ್ಲಿಸಿದ ಬಳಿಕ ಸತ್ಯಂ ಅವರು ಸ್ವಿಟ್ಜರ್ಲೆಂಡ್ನ ಆಪಲ್ ಕಚೇರಿಯಲ್ಲಿ 'ಸಿರಿ ಸ್ಪೀಚ್' ತಂಡದೊಂದಿಗೆ ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಇಂಟರ್ನ್ಶಿಪ್ ಪಡೆದರು. ಇದರ ನಂತರ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ನಲ್ಲಿ ಮಷಿನ್ ಲರ್ನಿಂಗ್ ಸಿಸ್ಟಮ್ಸ್ ರಿಸರ್ಚ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಅಧಿಕೃತವಾಗಿ ಆರಂಭಿಸಿದರು.
ಪ್ರಸ್ತುತ ಅವರು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸತ್ಯಂ ಕುಮಾರ್ ಅವರ ಅಸಾಧಾರಣ ಯಶಸ್ಸಿನ ಪಯಣವು ಮಧ್ಯಮ ವರ್ಗದ ಕೃಷಿಕ ಕುಟುಂಬಗಳಿಂದ ಬಂದಿರುವ ಕೋಟ್ಯಂತರ ಮಕ್ಕಳಿಗೆ ಛಲ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ದೊಡ್ಡ ಕನಸುಗಳನ್ನು ನನಸು ಮಾಡಬಹುದು ಎಂಬುದಕ್ಕೆ ಸ್ಪೂರ್ತಿಯಾಗಿದೆ.