ತುಮಕೂರು, ಆ. 30 (DaijiworldNews/AA): ಇನ್ಮುಂದೆ ನಾನು ಲೋಕಸಭೆಗೂ ನಿಲ್ಲಲ್ಲ, ವಿಧಾನಸಭೆಗೂ ನಿಲ್ಲಲ್ಲ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಿವಂಗತ ಮಾಜಿ ಸಚಿವ ವೀರಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ನನಗೆ ಈಗ 80 ವರ್ಷ, ನಾನು ಆರೋಗ್ಯವಾಗಿದ್ದೇನೆ. ಎಷ್ಟು ವರ್ಷ ಬದುಕಿರುತ್ತೇನೆ ಅಂತಾ ಗೊತ್ತಿಲ್ಲ. ನಾನು ಮುಂದಿನ ಚುನಾವಣೆಗೆ ನಿಲ್ಲಬಾರದು ಅಂತಾ ಅಂದುಕೊಂಡಿದ್ದೇನೆ. ಕಾರಣ ವಯಸ್ಸು ಆಯಿತು ಅಂತಾ ಅಲ್ಲ. ಚುನಾವಣಾ ವ್ಯವಸ್ಥೆ ಬಹಳ ದುಬಾರಿಯಾಗಿದೆ ಅಂತಾ. ಚುನಾವಣೆ ವ್ಯವಸ್ಥೆ ಸುಧಾರಣೆ ಮಾಡದೇ ಹೋದರೆ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಇರೋದಕ್ಕೆ ಸಾಧ್ಯವಿಲ್ಲ. ಇನ್ಮುಂದೆ ಲೋಕಸಭೆಗೂ ನಿಲ್ಲೊಲ್ಲ, ವಿಧಾನಸಭೆಗೂ ನಿಲ್ಲೊಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು" ಎಂದು ಹೇಳಿದರು.
"ನನಗೆ ಸಂಸತ್ಗೆ ಹೋಗಬೇಕು ಅಂತಾ ಆಫರ್ ಬಂದಿತ್ತು. ರಿಜೆಕ್ಟ್ ಮಾಡಿದೆ. 1991ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ನಿಂತಿದ್ದೆ. 10,000 ಮತಗಳಿಂದ ಸೋತಿದ್ದೆ. ಆಗ ಹೆಗಡೆ ಅವರು ಕೂಡ ಸೋತರು. ಅವತ್ತೆ ತೀರ್ಮಾನ ಮಾಡ್ದೆ. ಇನ್ನು ಯಾವತ್ತೂ ಲೋಕಸಭೆಗೆ ನಿಲ್ಲಬಾರದು ಅಂತಾ" ಎಂದು ಹೇಳಿದರು.