ಬೆಂಗಳೂರು, ಆ. 29 (DaijiworldNews/AK): ಸೆ.1ರಿಂದ ಬಿಜೆಪಿ ವತಿಯಿಂದ ನಡೆಯುವ ಪಾದಯಾತ್ರೆಗೆ ಕಾರಣ ಕೇವಲ ಒಂದೇ ಅಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ದಲಿತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದು ವಿವರಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪಾದಯಾತ್ರೆ ಮುಂದುವರೆಯಲಿದೆ ಎಂದರು. ಪರಿಶಿಷ್ಟರಿಗಾಗಿ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿಯ 53 ಸಾವಿರ ಕೋಟಿ ರೂಪಾಯಿಗಳನ್ನು ಈ ಸರಕಾರ ಅವರ ಅಭ್ಯುದಯಕ್ಕೆ ಇಡುವ ಬದಲು ಬೇರೆ ಬೇರೆ ಕಾರ್ಯಗಳಿಗೆ ದುರುಪಯೋಗ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದರು. ಆ ಹಣ ಆ ಜನಾಂಗಕ್ಕೆ ತಲುಪಬೇಕು ಎಂದು ಆಗ್ರಹಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಇಡೀ ದೇಶದಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ 7.5 ಮೀಸಲಾತಿ ಇದೆ. ರಾಜ್ಯದಲ್ಲಿ ಯಾಕಿಲ್ಲ ಎಂದು ಕೇಳಿದರು. ವಾಲ್ಮೀಕಿ ಸಮಾಜದ ಸ್ವಾಮೀಜಿ ವರ್ಷಗಟ್ಟಲೆ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ಶ್ರೀರಾಮುಲು ಮತ್ತಿತರರು ಹೋರಾಟ ಮಾಡಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರು. ಜಾರಿಗೆ ಬಂದಿದ್ದನ್ನು ಇವರು ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದರು.
ಅದನ್ನು ಮತ್ತೆ ಶೇ 7 ಮತ್ತು 17ಕ್ಕೆ ಏರಿಸಬೇಕೆಂಬ ನಮ್ಮ ಬೇಡಿಕೆ ಇದೆ. ವಾಲ್ಮೀಕಿ ನಿಗಮದ 187 ಕೋಟಿ ಬೇರೆ ಬೇರೆ ಕಾರಣಕ್ಕೆ ಹೋದುದು ವಾಪಸ್ ಬರಬೇಕಲ್ಲವೇ ಎಂದು ಕೇಳಿದರು. ಪರಿಶಿಷ್ಟ ಜಾತಿ, ವರ್ಗಗಳಿಗೆ ಬಹಳಷ್ಟು ಅನ್ಯಾಯ ಆಗುತ್ತಿದೆ. ಅವರಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳು ಹೋರಾಟ ಮಾಡಬೇಕೇ ಬೇಡವೇ ಎಂದು ಕೇಳಿದರು. ಮೀಸಲಾತಿ ಕಡಿಮೆ ಮಾಡಿದಾಗ ಈ 15 ಜನ ಕಾಂಗ್ರೆಸ್ಸಿನ ಶಾಸಕರು ಚುರುಮುರಿ ತಿನ್ನುತ್ತಿದ್ದರೇ ಎಂದು ಪ್ರಶ್ನೆ ಹಾಕಿದರು.