ನವದೆಹಲಿ,ಆ. 29 (DaijiworldNews/AK): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಇನ್ ಲವ್’ ಪ್ರಕಟಣೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ತೀವ್ರಗೊಂಡಿದೆ. ಸಂಪಾದಕೀಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಈ ಪುಸ್ತಕದ ಪ್ರಕಟಣೆಯಿಂದ ಹಿಂದೆ ಸರಿದಿದೆ.

ಇದು ಭಾರತದ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಪೆಂಗ್ವಿನ್ ಈ ಪುಸ್ತಕವನ್ನು ಪ್ರಕಟಿಸಲು ಹಿಂದೇಟು ಹಾಕಿರುವುದಕ್ಕೆ ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರವು ಸಂಸ್ಥೆಗಳು ಮತ್ತು ಪ್ರಕಾಶಕರ ಮೇಲೆ ಒತ್ತಡ ತರುವ ಮೂಲಕ ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿರುವ ಪ್ರಮುಖ ಸತ್ಯಗಳು ಹೊರಬರದಂತೆ ತಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕಾಂಗ್ರೆಸ್ ಟೀಕಿಸಿದೆ.
ಇದು “ಪ್ರಜಾಪ್ರಭುತ್ವದ ಕೊಲೆ . ನರೇಂದ್ರ ಮೋದಿ, ಆರ್ಎಸ್ಎಸ್ ಹಾಗೂ ಮೋದಿ ಆಡಳಿತಾವಧಿಯಲ್ಲಿ ಭಾರತದ ಗಡಿ ಭಾಗವನ್ನು ಚೀನಾ ವಶಪಡಿಸಿಕೊಂಡ ವಿಷಯಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರವು ಭಾರಿ ಒತ್ತಡ ಹೇರಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಸುದೀರ್ಘ ರಾಜಕೀಯ ಜೀವನ, ಯುಪಿಎ ಸರ್ಕಾರದ ಅವಧಿಯ ಪ್ರಮುಖ ನಿರ್ಧಾರಗಳು ಮತ್ತು ಭಾರತೀಯ ರಾಜಕೀಯದ ಕುರಿತಾದ ಅವರ ಅನುಭವಗಳನ್ನು ಒಳಗೊಂಡಿರುವ ಈ ಪುಸ್ತಕವು ಪ್ರಕಟಣೆಗೆ ಮುನ್ನವೇ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷವು ಪುಸ್ತಕದ ಪ್ರಕಟಣೆಗೆ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ಅದನ್ನು ಸಾರ್ವಜನಿಕರ ಮುಂದೆ ತರುವುದಾಗಿ ಸ್ಪಷ್ಟಪಡಿಸಿದೆ.
ಪೆಂಗ್ವಿನ್ ಸಂಸ್ಥೆಯನ್ನು “ಪೆಂಗ್ವಿನ್ ಜನತಾ ಪಾರ್ಟಿ” ಎಂದು ಲೇವಡಿ ಮಾಡಿರುವ ಯುವ ಕಾಂಗ್ರೆಸ್, ನೀವು ಪ್ರಕಟಿಸಲು ಉತ್ಸುಕರಾಗಿದ್ದೀರೋ ಇಲ್ಲವೋ ಎಂಬುದಲ್ಲ, ಯಾವ ಬದಲಾವಣೆಗಳನ್ನು ಮಾಡಲು ಕೋರಿದ್ದಿರಿ ಮತ್ತು ಏಕೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದೆ. ಈ ನಡುವೆ ಕೇರಳ ಕಾಂಗ್ರೆಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, “ಯಾವುದೇ ಶಕ್ತಿಯೂ ‘ಬಿಲಾಂಗಿಂಗ್’ ಪುಸ್ತಕವು ಓದುಗರನ್ನು ತಲುಪುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದೆ.