ಬೆಂಗಳೂರು, ಆ. 29 (DaijiworldNews/AA): ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ಗೆ ಜಾಮೀನು ಮಂಜೂರು ಮಾಡಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಆದರೆ ತಲಾ 10,000 ರೂ. ವೈಯಕ್ತಿಕ ಶ್ಯೂರಿಟಿ ನೀಡುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ ಕಾರ್ಯಕರ್ತರ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಕಾರ್ಯಕರ್ತ ತೇಜಸ್ ಗೌಡ ಎಂಬವರು ಕೋರ್ಟ್ಗೆ ಖಾಸಗಿ ದೂರು ನೀಡಿದ್ದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ನಲಪಾಡ್ಗೆ ಈ ಹಿಂದೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಜುಲೈ 21ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು. ಆದರೆ ಕಳೆದ ವಿಚಾರಣೆ ವೇಳೆ ಇವರಿಬ್ಬರೂ ಕೋರ್ಟ್ನಿಂದ ವಿನಾಯಿತಿ ಪಡೆದುಕೊಂಡಿದ್ದರು.