ಕೊಯಮತ್ತೂರು, ಆ. 29 (DaijiworldNews/AA): ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ಸತತ ಆರಂಭಿಕ ವೈಫಲ್ಯಗಳನ್ನು ಮೆಟ್ಟಿ ನಿಂತು 2025ರ ಯುಪಿಎಸ್ಸಿಯಲ್ಲಿ ಅಖಿಲ ಭಾರತ 18ನೇ ರ್ಯಾಂಕ್ ಪಡೆದ ಶ್ರುತಿ ಆರ್. ಅವರ ಯಶೋಗಾಥೆ ಇದು.

ಕೊಯಮತ್ತೂರಿನ ಶ್ರುತಿ ಆರ್. ಅವರು ಶೈಕ್ಷಣಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಅವರ ತಂದೆ ಖಾಸಗಿ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಹಿಂದುಸ್ತಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ, ಪದವಿ ಪೂರ್ಣಗೊಳಿಸಿದ ಬಳಿಕ ಶ್ರುತಿ ಆರಂಭದಲ್ಲಿ ಕಾರ್ಪೊರೇಟ್ ಕ್ಷೇತ್ರಕ್ಕೆ ಪ್ರವೇಶಿಸಿದರು.
ಆದರೆ ಶ್ರುತಿ ಅವರು ಕೋವಿಡ್-19 ಸಮಯದಲ್ಲಿ ಧೈರ್ಯದ ನಿರ್ಧಾರ ಕೈಗೊಂಡು ಉದ್ಯೋಗ ತೊರೆದು ಯುಪಿಎಸ್ಸಿ ಪರೀಕ್ಷೆಗೆ ಸಂಪೂರ್ಣವಾಗಿ ಸಿದ್ಧತೆ ಆರಂಭಿಸಿದರು. ಆದರೆ ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಶ್ರುತಿ ಪ್ರಿಲಿಮ್ಸ್ ಪರೀಕ್ಷೆಯಲ್ಲೇ ಉತ್ತೀರ್ಣರಾಗಲು ವಿಫಲರಾದರು.
ಆದರೆ ಶ್ರುತಿ ಅವರು ಧೃತಿಗೆಡದೆ 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 18 ನೇ ಅಖಿಲ ಭಾರತ ರ್ಯಾಂಕ್ ಪಡೆದು ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಈ ಮೂಲಕ ಅವರು ಹಲವಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.