ಬೆಂಗಳೂರು, ಆ. 28 (DaijiworldNews/AA): ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ.

ದೆಹಲಿಯಿಂದ ವಾಪಾಸಾದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ" ಎಂದು ಕಣ್ಣೀರಿಟ್ಟಿದ್ದಾರೆ.
"ವಿರೋಧ ಪಕ್ಷದವರಿಂದ ಕುತಂತ್ರ ರಾಜಕಾರಣ ನಡೆಯುತ್ತಿದೆ. ಸದನದಲ್ಲಿ ಹಲವು ಬಾರಿ ಮನವಿ ಮಾಡಿಕೊಂಡೆವು, ನೋಟಿಸ್ ಕೊಡಿ. ಚರ್ಚೆಗೆ ಬನ್ನಿ ಎಂದು ಕೇಳಿಕೊಂಡೆವು, ಆದರೂ ಅವರು ಚರ್ಚೆಗೆ ಬರಲಿಲ್ಲ. ಈಗ ಇಶ್ಯೂಲೆಸ್ ಇಶ್ಯೂ ಇಟ್ಟುಕೊಂಡು ಪಾದಯಾತ್ರೆಗೆ ಹೊರಟಿದ್ದಾರೆ. ಬಿಜೆಪಿಯವರು ಮನುಸ್ಮೃತಿಯ ವಾದ ಮಾಡುತ್ತಿದ್ದು, ಸಂವಿಧಾನ ನಮಗೆಲ್ಲಾ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ" ಎಂದರು.
"ದಲಿತರು, ಬಡವರು ಹಾಗೂ ಆದಿವಾಸಿಗಳು ಬದುಕಬಾರದು ಎಂಬ ಮನಸ್ಥಿತಿಯನ್ನು ಬಿಜೆಬಿಗರು ಹೊಂದಿದ್ದಾರೆ. 2024ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ವಿನಾಕಾರಣ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿಗೆ ಹಾಕಿದ್ರು. ಬಳಿಕ ಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದೇನೆ. ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ" ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ, ತಾಕತ್ತಿದ್ದರೆ ನಮ್ಮ ಪಕ್ಷವನ್ನು ಎದುರಿಸಿ. ಇಡಿ, ಸಿಬಿಐ ಬಿಟ್ಟು ಕೇಸ್ ಹಾಕಿಸ್ತಾರೆ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ. ರೆಡ್ಡಿ, ರಾಮುಲು ಬರಲಿ, ಜನತಾ ನ್ಯಾಯಾಲಯಕ್ಕೆ ಹೋಗೋಣ. ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್ಗಳು, ಚಲಾವಣೆ ಇಲ್ಲದ ನಾಣ್ಯಗಳು. ಆರೋಪ ಮುಕ್ತನಾಗಿ ಬರುತ್ತೇನೆ ಎಂಬ ನಂಬಿಕೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.