ಬೆಂಗಳೂರು, ಆ. 28 (DaijiworldNews/TA): ಸಂಸ್ಕೃತ ಎಂದಾಕ್ಷಣ ಬಹುತೇಕರಿಗೆ ಕಷ್ಟಕರವಾದ ಭಾಷೆ ಎಂಬ ಭಾವನೆ ಮೂಡುವುದು ಸಹಜ. ಹೀಗಾಗಿ ಸಂಸ್ಕೃತವನ್ನು ದೈನಂದಿನ ಆಡುಭಾಷೆಯಾಗಿ ಬಳಸುವವರ ಸಂಖ್ಯೆ ಇಂದಿಗೂ ವಿರಳ. ಆದರೆ ಕರ್ನಾಟಕದಲ್ಲಿ ಕೆಲವು ಗ್ರಾಮಗಳು ಮಾತ್ರ ಈ ಅಪರೂಪದ ಭಾಷಾ ಪರಂಪರೆಯನ್ನು ಇಂದಿಗೂ ಜೀವಂತವಾಗಿರಿಸಿವೆ.

ಸಂಸ್ಕೃತ ಭಾಷೆಯ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಹಾಗೂ ಹೆಚ್ಚಿನ ಜನರು ಸಂಸ್ಕೃತವನ್ನು ಕಲಿತು ಮಾತನಾಡುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 28ರಂದು ವಿಶ್ವ ಸಂಸ್ಕೃತ ದಿನ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಕರ್ನಾಟಕದ ಸಂಸ್ಕೃತ ಮಾತನಾಡುವ ಗ್ರಾಮಗಳತ್ತ ಒಂದು ನೋಟ ಇಲ್ಲಿದೆ.
ವಿಶ್ವ ಸಂಸ್ಕೃತ ದಿನದ ಇತಿಹಾಸವೇನು? : ಭಾರತದ ಪ್ರಾಚೀನ ಭಾಷೆಗಳಲ್ಲಿ ಪ್ರಮುಖವಾದ ಸಂಸ್ಕೃತದ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ 1969ರಲ್ಲಿ ಮೊದಲ ಬಾರಿಗೆ ಸಂಸ್ಕೃತ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಶ್ರಾವಣ ಪೂರ್ಣಿಮೆಯಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದೆ.
ಕರ್ನಾಟಕದಲ್ಲಿದೆ ‘ಸಂಸ್ಕೃತ ಗ್ರಾಮ’! : ಸಂಸ್ಕೃತ ಕೇವಲ ಪಠ್ಯಪುಸ್ತಕ ಅಥವಾ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗದೆ, ದೈನಂದಿನ ಬದುಕಿನಲ್ಲೂ ಬಳಕೆಯಾಗುತ್ತಿರುವ ಗ್ರಾಮಗಳು ಕರ್ನಾಟಕದಲ್ಲಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂಸ್ಕೃತದಲ್ಲಿ ಮಾತನಾಡುವ ಮೂಲಕ ಈ ಗ್ರಾಮಗಳು ಭಾಷೆಯ ಸೊಗಡನ್ನು ಉಳಿಸಿಕೊಂಡಿವೆ.
ಹೊಸಹಳ್ಳಿ : ಇಲ್ಲಿ ಸಂಸ್ಕೃತವೇ ವ್ಯವಹಾರಿಕ ಭಾಷೆ. ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿ ಗ್ರಾಮವು ಸಂಸ್ಕೃತ ಭಾಷೆಯ ಬಳಕೆಯಿಂದ ಗಮನ ಸೆಳೆದಿದೆ. ಇಲ್ಲಿನ ಜನರು ದೈನಂದಿನ ವ್ಯವಹಾರಗಳಲ್ಲಿಯೂ ಸಂಸ್ಕೃತವನ್ನು ಬಳಸುತ್ತಾರೆ. ಮಕ್ಕಳು, ಯುವಕರು ಹಾಗೂ ವೃದ್ಧರು ಸಂಸ್ಕೃತದಲ್ಲೇ ಪರಸ್ಪರ ಸಂವಹನ ನಡೆಸುವುದು ಈ ಗ್ರಾಮದ ವಿಶೇಷತೆ. ಶಾಲಾ ಶಿಕ್ಷಣದಲ್ಲಿಯೂ ಸಂಸ್ಕೃತಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ತಲೆಮಾರಿಗೆ ಭಾಷೆಯ ಪರಿಚಯ ಮುಂದುವರಿಯುತ್ತಿದೆ.
ಮತ್ತೂರು : ನಾಲ್ಕು ದಶಕಗಳಿಂದ ಸಂಸ್ಕೃತದ ಅಭಿಯಾನ. ಶಿವಮೊಗ್ಗ ನಗರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಮತ್ತೂರು ಗ್ರಾಮವು ದೇಶದ ಪ್ರಸಿದ್ಧ ‘ಸಂಸ್ಕೃತ ಗ್ರಾಮ’ಗಳಲ್ಲಿ ಒಂದಾಗಿದೆ. ಇಲ್ಲಿನ ಜನರು ಸಂಸ್ಕೃತವನ್ನೇ ತಮ್ಮ ದೈನಂದಿನ ಆಡುಭಾಷೆಯಾಗಿ ಬಳಸುತ್ತಿದ್ದಾರೆ.
ಸುಮಾರು ನಾಲ್ಕು ದಶಕಗಳ ಹಿಂದೆ ಸಂಸ್ಕೃತವನ್ನು ಉತ್ತೇಜಿಸುವ ಉದ್ದೇಶದಿಂದ ಸಂಸ್ಕೃತ ಭಾರತಿ ಸಂಘವು ಮತ್ತೂರಿನಲ್ಲಿ ಹತ್ತು ದಿನಗಳ ಕಾರ್ಯಾಗಾರ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮತ್ತೂರು ಸಂಸ್ಕೃತ ಮಾತನಾಡುವ ಗ್ರಾಮವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅಂದಿನಿಂದ ಗ್ರಾಮದಲ್ಲಿ ಸಂಸ್ಕೃತದ ಬಳಕೆಯನ್ನು ಉತ್ತೇಜಿಸುವ ಚಟುವಟಿಕೆಗಳು ಮುಂದುವರಿದಿವೆ. ಮನೆ, ಅಂಗಡಿ, ಶಾಲೆ ಹಾಗೂ ದೈನಂದಿನ ವ್ಯವಹಾರಗಳಲ್ಲಿಯೂ ಸಂಸ್ಕೃತವನ್ನು ಬಳಸುವ ಮೂಲಕ ಇಲ್ಲಿನ ಜನರು ‘ದೇವಭಾಷೆ’ಯನ್ನು ಜೀವಂತವಾಗಿರಿಸಿದ್ದಾರೆ.
ಸಂಸ್ಕೃತವನ್ನು ಕೇವಲ ಕಲಿಯುವ ಭಾಷೆಯಾಗಿ ನೋಡದೆ, ದೈನಂದಿನ ಸಂವಹನದ ಭಾಷೆಯಾಗಿ ಬಳಸುತ್ತಿರುವ ಹೊಸಹಳ್ಳಿ ಮತ್ತು ಮತ್ತೂರು, ಭಾರತದ ಪ್ರಾಚೀನ ಭಾಷಾ ಪರಂಪರೆಯನ್ನು ಉಳಿಸುವಲ್ಲಿ ವಿಶಿಷ್ಟ ಮಾದರಿಯಾಗಿವೆ. ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ಇಂತಹ ಗ್ರಾಮಗಳು ‘ಭಾಷೆ ಉಳಿಯಬೇಕಾದರೆ ಅದು ಬದುಕಿನ ಭಾಗವಾಗಬೇಕು’ ಎಂಬ ಸಂದೇಶವನ್ನು ಸಾರುತ್ತಿವೆ.