ನವದೆಹಲಿ, ಆ. 28 (DaijiworldNews/TA): ಸಹೋದರ-ಸಹೋದರಿಯರ ಪವಿತ್ರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದ ಸಂಕೇತವಾಗಿರುವ ರಕ್ಷಾಬಂಧನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ರಕ್ಷಾಬಂಧನದ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ ಹಾಗೂ ಪರಸ್ಪರ ನಂಬಿಕೆಯ ಬಾಂಧವ್ಯ ಸದಾ ಅಚಲವಾಗಿರಲಿ ಎಂದು ಅವರು ಆಶಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ರಕ್ಷಾಬಂಧನದ ಸಂಭ್ರಮ ಮನೆಮಾಡಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಪ್ರಧಾನಿಗೆ ರಾಖಿ ಕಟ್ಟಿ ಹಬ್ಬದ ಶುಭಾಶಯ ಕೋರಿದರು.
ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳ ಯೋಧರಿಗೂ ದೇಶದ ವಿವಿಧೆಡೆ ಮಹಿಳೆಯರು ಮತ್ತು ಮಕ್ಕಳು ರಾಖಿ ಕಳುಹಿಸಿ ತಮ್ಮ ಪ್ರೀತಿ ಹಾಗೂ ಗೌರವ ವ್ಯಕ್ತಪಡಿಸಿದ್ದಾರೆ. ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ಮಹಿಳೆಯರ ಗೌರವ, ಸುರಕ್ಷತೆ ಮತ್ತು ನಾರಿ ಶಕ್ತಿಯ ಸಬಲೀಕರಣದ ಸಂಕೇತವೂ ಆಗಿದೆ ಎಂದು ಗಣ್ಯರು ಸಂದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ‘ವಿಶ್ವ ಸಂಸ್ಕೃತ ದಿನ’ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶ-ವಿದೇಶಗಳ ಸಂಸ್ಕೃತ ಪ್ರೇಮಿಗಳು ಹಾಗೂ ನಾಗರಿಕರಿಗೆ ಸಂಸ್ಕೃತ ಭಾಷೆಯಲ್ಲೇ ಶುಭಾಶಯ ಕೋರಿದ್ದಾರೆ.
ಸಂಸ್ಕೃತವು ಭಾರತದ ಪ್ರಾಚೀನ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ನಿಧಿಯಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿರುವ ಅವರು, ಈ ಕಾಲಾತೀತ ಭಾಷೆಯನ್ನು ಕಲಿಯುತ್ತಿರುವ, ಬೋಧಿಸುತ್ತಿರುವ ಹಾಗೂ ಮುಂದಿನ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವ ಎಲ್ಲರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಶ್ರಾವಣ ಪೂರ್ಣಿಮೆಯಂದು ‘ವಿಶ್ವ ಸಂಸ್ಕೃತ ದಿನ’ : ಪ್ರಾಚೀನ ಭಾರತದಲ್ಲಿ ಗುರುಕುಲಗಳಲ್ಲಿ ಹೊಸ ಶೈಕ್ಷಣಿಕ ವರ್ಷವು ಶ್ರಾವಣ ಪೂರ್ಣಿಮೆಯಂದು ‘ಉಪಾಕರ್ಮ’ ಅಥವಾ ‘ಶ್ರಾವಣಿ ಪರ್ವ’ ವಿಧಿಯೊಂದಿಗೆ ಆರಂಭವಾಗುತ್ತಿತ್ತು. ಈ ಹಿನ್ನೆಲೆ 1969ರಲ್ಲಿ ಭಾರತ ಸರ್ಕಾರವು ಶ್ರಾವಣ ಪೂರ್ಣಿಮೆಯನ್ನು ‘ವಿಶ್ವ ಸಂಸ್ಕೃತ ದಿನ’ವಾಗಿ ಆಚರಿಸಲು ನಿರ್ಧರಿಸಿತ್ತು.
ಸಂಸ್ಕೃತ ಭಾಷೆಯ ಬೆಳವಣಿಗೆ ಹಾಗೂ ಜನಪ್ರಿಯತೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ ‘ಜ್ಞಾನ ಭಾರತಂ ಮಿಷನ್’ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಹಾಭಾರತದಲ್ಲಿ ಯುಧಿಷ್ಠಿರನಿಗೆ ತಿಳಿಸಲಾದ ರಕ್ಷಾ ಸೂತ್ರದ ಮಹತ್ವವನ್ನು ಸಾರುವ ಪವಿತ್ರ ಶ್ಲೋಕವನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ. ಈ ರಕ್ಷಾ ಸೂತ್ರವು ವಿಜಯ, ಸುಖ, ಆರೋಗ್ಯ, ಸಂಪತ್ತು ಹಾಗೂ ಸಂತಾನಕ್ಕೆ ಆಶೀರ್ವಾದ ನೀಡುತ್ತದೆ ಎಂಬ ಸಂದೇಶವನ್ನು ಶ್ಲೋಕ ಒಳಗೊಂಡಿದೆ.