ನವದೆಹಲಿ, ಆ. 27 (DaijiworldNews/AK):ನೇಪಾಳದಲ್ಲಿ ಬುಧವಾರ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 270 ದಾಟಿದೆ. ನಾಪತ್ತೆಯಾದವರ ಪೈಕಿ 288 ಭಾರತೀಯ ಪ್ರಜೆಗಳು ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.

ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಂತ್ರಸ್ತರಿಗೆ ನೆರವಾಗಲು ಭಾರತ ಸರ್ಕಾರವು ವಿಶೇಷ ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಿದೆ. ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಿಂದ ತಮಿಳುನಾಡಿನ 21 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ವಾಪಸ್ ಕರೆತರಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಕಂಟ್ರೋಲ್ ರೂಮ್ಗಳನ್ನು ತೆರೆದಿದೆ. ನಾಪತ್ತೆಯಾಗಿರುವ ಭಾರತೀಯರ ಕುಟುಂಬಸ್ಥರಿಗೆ ಮಾಹಿತಿ ನೀಡಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಚೀನಾ ಗಡಿಯ ಟಿಬೆಟ್ ಭಾಗದಲ್ಲೂ ಸುಮಾರು 200 ಭಾರತೀಯ ಕೈಲಾಸ ಮಾನಸಸರೋವರ ಯಾತ್ರಿಕರು ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಭಾರತ ಸರ್ಕಾರದ ನೆರವು ಕೋರಿದ್ದಾರೆ.