ನವದೆಹಲಿ, ಆ. 26 (DaijiworldNews/AA): ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು, ಹೊಸ ಅಮೆರಿಕನ್ ಸುಂಕಗಳು ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕತೆಯು ಬಲವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.

ತನ್ನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ತಿಳಿಸಿರುವ ಆರ್ಬಿಐ, 'ದೇಶದಲ್ಲಿನ ಬಲವಾದ ಆಂತರಿಕ ಬೇಡಿಕೆ, ಉತ್ಪಾದನಾ ಮತ್ತು ಸೇವಾ ವಲಯಗಳ ಚಟುವಟಿಕೆಗಳು ಭಾರತೀಯ ಆರ್ಥಿಕತೆಗೆ ಭದ್ರವಾದ ಬೆಂಬಲವಾಗಿ ನಿಂತಿವೆ. ಅಮೆರಿಕ ವಿಧಿಸಿರುವ ಹೊಸ ಸುಂಕಗಳಿಂದ ಚೀನಾ, ವಿಯೆಟ್ನಾಮ್ ಮತ್ತು ಥೈಲ್ಯಾಂಡ್ನಂತಹ ಇತರ ಏಷ್ಯನ್ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕಡಿಮೆ ಪರಿಣಾಮವಾಗುವ ನಿರೀಕ್ಷೆಯಿದೆ. ಭಾರತದ ಪ್ರಮುಖ ರಫ್ತು ಸರಕುಗಳಾದ ಸ್ಮಾರ್ಟ್ಫೋನ್ಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಔಷಧಗಳು ಅಮೆರಿಕದ ಟ್ಯಾರಿಫ್ ವ್ಯಾಪ್ತಿಯಿಂದ ಹೊರಗಿವೆ' ಎಂದು ಮಾಹಿತಿ ನೀಡಿದೆ.
'ಮುಂಗಾರು ಮಳೆಯ ಚೇತರಿಕೆಯು ಕೃಷಿ ವಲಯದ ಮೇಲಿನ ಆತಂಕವನ್ನು ಕಡಿಮೆ ಮಾಡಿದೆ. ವಿದೇಶಿ ನೇರ ಹೂಡಿಕೆ (ಎಫ್ಡಿಐ) ಸುಧಾರಿಸಿದ್ದು, ಜುಲೈ ತಿಂಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) ಷೇರುಪೇಟೆಯಲ್ಲಿ ಖರೀದಿಗೆ ಮುಂದಾಗಿದ್ದಾರೆ. ಈ ಎಲ್ಲಾ ಸಂಗತಿಗಳು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಎನಿಸುತ್ತವೆ' ಎಂದು ಆರ್ಬಿಐ ತನ್ನ ಬುಲೆಟಿನ್ನಲ್ಲಿ ಹೇಳಿದೆ
'ಜಾಗತಿಕವಾಗಿ ಪ್ರತಿಕೂಲ ವಾತಾವರಣವಿದ್ದರೂ ಭಾರತದ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಆರ್ಥಿಕ ಬೆಳವಣಿಗೆಗೆ ರಕ್ಷಣೆ ಒದಗಿಸುತ್ತಿವೆ' ಎಂದು ಆರ್ಬಿಐನ ಸಂಶೋಧಕರು ಮತ್ತು ಆರ್ಥಿಕ ತಜ್ಞರು ರಚಿಸಿರುವ ವರದಿಯಲ್ಲಿ ಹೇಳಲಾಗಿದೆ.