ನವದೆಹಲಿ,ಆ. 25 (DaijiworldNews/AK): ದೇಶದ ರಾಜಧಾನಿ ದೆಹಲಿಯಲ್ಲಿ ಹಂದಿ ಜ್ವರ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,308 ಕ್ಕೆ ತಲುಪಿದೆ.

ದೇಶದಲ್ಲಿ ಯಾವುದೇ ಹೊಸ ಅಥವಾ ಮಾರಕ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಇದು ಮಳೆಗಾಲ ಮತ್ತು ಚಳಿಗಾಲದ ಆರಂಭದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಮಾನ್ಯ ಜ್ವರ ಆಗಿರುವುದರಿಂದ ನಾಗರಿಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಆರೋಗ್ಯ ಸಚಿವ ಡಾ. ಪಂಕಜ್ ಸಿಂಗ್ ಅವರು ಎನ್ಡಿಎಂಸಿ, ಎಂಸಿಡಿ ಹಾಗೂ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.ರಾಜಧಾನಿಯ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್ಗಳು, ಪ್ರತ್ಯೇಕ ಐಸೋಲೇಶನ್ ವಾರ್ಡ್ಗಳು, ವೈದ್ಯರು ಮತ್ತು ಅಗತ್ಯ ಔಷಧಿಗಳ ದಾಸ್ತಾನು ಲಭ್ಯವಿದೆ.
ವರದಿಯಾದ ಸುಮಾರು 3 ಸಾವಿರ ರೋಗಿಗಳಲ್ಲಿ (H1N1 ಮತ್ತು ಇನ್ಫ್ಲುಯೆನ್ಸ ಬಿ ಸೇರಿದಂತೆ) ಬಹುತೇಕರು ಸಾಮಾನ್ಯ ಚಿಕಿತ್ಸೆಯೊಂದಿಗೆ ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ. ಯಾವುದೇ ರೋಗಿ ಐಸಿಯು ಅಥವಾ ವೆಂಟಿಲೇಟರ್ನಲ್ಲಿಲ್ಲ ಹಾಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.