ನವದೆಹಲಿ, ಆ. 25 (DaijiworldNews/AK): 2013ರ ಗೋವಾದ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಅವರಿಗೆ 2 ವಾರಗಳ ಒಳಗಾಗಿ ಶರಣಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಶರಣಾಗತಿಯಿಂದ ವಿನಾಯಿತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ತರುಣ್ ತೇಜ್ಪಾಲ್ ಅವರು ಶರಣಾಗಿ, ಅದಕ್ಕೆ ಸಂಬಂಧಿಸಿದ ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರವಷ್ಟೇ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಪೀಠವು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಶಿಕ್ಷೆಯ ಆದೇಶವನ್ನು ಸವಾಲು ಮಾಡುವ ಮೊದಲು ವ್ಯಕ್ತಿಯು ಶರಣಾಗುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ ಶರಣಾಗತಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಥವಾ, ಇದರ ಬದಲಾಗಿ ಶರಣಾಗತಿಯಿಂದ ವಿನಾಯಿತಿ ಕೋರಿ ಅರ್ಜಿಯನ್ನು ಮೇಲ್ಮನವಿಯೊಂದಿಗೆ ಸಲ್ಲಿಸಬಹುದಾಗಿದೆ.
ಪ್ರಕರಣದ ಹಿನ್ನಲೆ
2013ರ ನವೆಂಬರ್ 7 ಮತ್ತು 8ರಂದು ಗೋವಾದ ಪಣಜಿಯಲ್ಲಿ ನಡೆದ ತೆಹೆಲ್ಕಾ ಮ್ಯಾಗಜಿನ್ನ ಅಧಿಕೃತ ಕಾರ್ಯಕ್ರಮವೊಂದರಲ್ಲಿ, ಹೋಟೆಲ್ ಲಿಫ್ಟ್ ಒಳಗೆ ಆಗ ತೆಹಲ್ಕಾದ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಪತ್ರಕರ್ತೆಯೊಬ್ಬರು ಆರೋಪಿಸಿದ್ದರು. ಆ ಆರೋಪಗಳ ಮೇಲೆ 2013ರ ನವೆಂಬರ್ 30ರಂದು ತರುಣ್ ತೇಜ್ಪಾಲ್ ಅವರನ್ನು ಬಂಧಿಸಲಾಯಿತು.
2017ರ ಸೆಪ್ಟೆಂಬರ್ 29ರಂದು ಅವರ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕಾನೂನುಬಾಹಿರ ಬಂಧನ ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ವಿಭಾಗಗಳ ಅಡಿಯಲ್ಲಿ ದೋಷಾರೋಪಣೆ ಹೊರಿಸಲಾಯಿತು. ಆದರೆ, ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. 2021ರ ಮೇ ತಿಂಗಳಲ್ಲಿ ಗೋವಾ ಸತ್ರ ನ್ಯಾಯಾಲಯವು ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿ ತರುಣ್ ತೇಜ್ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್ನಲ್ಲಿ ಖುಲಾಸೆಯನ್ನು ಚಾಲೆಂಜ್ ಮಾಡಿತ್ತು.
2021ರಲ್ಲಿ ಗೋವಾ ಸತ್ರ ನ್ಯಾಯಾಲಯವು ನೀಡಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸಿ, ತರುಣ್ ತೇಜ್ಪಾಲ್ ಅವರನ್ನು ದೋಷಿ ಎಂದು ಆಗಸ್ಟ್ 6 ರಂದು ತೀರ್ಪು ನೀಡಿತ್ತು. ಬಾಂಬೆ ಹೈಕೋರ್ಟ್ನ ಗೋವಾ ಪೀಠದ ಈ ತೀರ್ಪನ್ನು ಪ್ರಶ್ನಿಸಿ ತರುಣ್ ತೇಜ್ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.