ಭೋಪಾಲ್, ಆ. 25 (DaijiworldNews/TA): ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಿನ ವೀಕ್ಷಣೆ ಮತ್ತು ವೈರಲ್ ಆಗುವ ಉದ್ದೇಶದಿಂದ ಕೆಲವರು ವಿಭಿನ್ನ ರೀತಿಯ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಆದರೆ ಕೆಲವೊಮ್ಮೆ ಇದೇ ಹುಚ್ಚಾಟ ಕಾನೂನು ಕ್ರಮಕ್ಕೂ ಕಾರಣವಾಗುತ್ತಿದೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ರೀಲ್ಸ್ಗಾಗಿ ಯುವಕನೊಬ್ಬ ಮಾಡಿದ ವಿಭಿನ್ನ ಪ್ರಯತ್ನ ಭಾರೀ ವೈರಲ್ ಆಗುವುದರ ಜೊತೆಗೆ ಪೊಲೀಸರ ಗಮನ ಸೆಳೆದಿದೆ.

ಗ್ವಾಲಿಯರ್ ನಿವಾಸಿ ಆದಿತ್ಯ ಸಿಕರ್ವಾರ್ ತನ್ನ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬರೋಬ್ಬರಿ 3,400 ಲಿಪ್ಸ್ಟಿಕ್ ಮುತ್ತಿನ ಗುರುತುಗಳಿಂದ ಅಲಂಕರಿಸಿ, ಅದೇ ಕಾರಿನಲ್ಲಿ ರೀಲ್ಸ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 24 ಗಂಟೆಯೊಳಗೆ ಬರೋಬ್ಬರಿ 55 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ ಎನ್ನಲಾಗಿದೆ. ಆದರೆ ರೀಲ್ಸ್ ವೈರಲ್ ಆಗುತ್ತಿದ್ದಂತೆ ಗ್ವಾಲಿಯರ್ ಟ್ರಾಫಿಕ್ ಪೊಲೀಸರ ಗಮನವೂ ವಿಡಿಯೋ ಮೇಲೆ ಬಿದ್ದಿದೆ. ಬಳಿಕ ಯುವಕನಿಗೆ ರೂ. 5,500 ದಂಡ ವಿಧಿಸಲಾಗಿದೆ. ವೈರಲ್ ಆಗಬೇಕು ಎಂಬ ಉದ್ದೇಶದಿಂದ ಆದಿತ್ಯ ವಿಭಿನ್ನ ಐಡಿಯಾವೊಂದನ್ನು ಮಾಡಿದ್ದಾನೆ. ಆತನ ಗರ್ಲ್ಫ್ರೆಂಡ್ ಲಿಪ್ಸ್ಟಿಕ್ ಬಳಸಿ ಕಾರಿನ ಬಾನೆಟ್, ಬಾಗಿಲು ಸೇರಿದಂತೆ ಹಲವು ಭಾಗಗಳಲ್ಲಿ ಸುಮಾರು 3,400 ಮುತ್ತಿನ ಗುರುತುಗಳನ್ನು ಮೂಡಿಸಿದ್ದಾಳೆ.
ಈ ವಿಶಿಷ್ಟ ‘ಕಿಸ್ಸಿಂಗ್ ಆರ್ಟ್’ ಪೂರ್ಣಗೊಳಿಸಲು ಸುಮಾರು ಮೂರೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ಲಿಪ್ಸ್ಟಿಕ್ ಗುರುತುಗಳಿಂದ ತುಂಬಿದ್ದ ಕಾರನ್ನು ರಸ್ತೆಗೆ ತೆಗೆದುಕೊಂಡು ಹೋಗಿ ರೀಲ್ಸ್ ಚಿತ್ರೀಕರಿಸಲಾಗಿದೆ. ನಂತರ ಈ ವೀಡಿಯೋವನ್ನು ‘Kissing Car’ ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 55 ಲಕ್ಷ ವೀಕ್ಷಣೆ ಪಡೆದುಕೊಂಡಿದೆ ಎನ್ನಲಾಗಿದೆ.
ಆದರೆ ರೀಲ್ಸ್ ವೈರಲ್ ಆಗಿದ್ದೇ ಯುವಕನಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ವಿಡಿಯೋದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಜೊತೆಗೆ ಕಾರಿನ ನೋಂದಣಿ ಸಂಖ್ಯೆ MP07 CC 9452 ಕೂಡ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತ್ತು. ಇದೇ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಕಾರನ್ನು ಪತ್ತೆಹಚ್ಚಿದ್ದಾರೆ. ಪೊಲೀಸರು ಥಾಟಿಪುರ ಪ್ರದೇಶದಿಂದ ಕಾರನ್ನು ವಶಕ್ಕೆ ಪಡೆದು, ಆದಿತ್ಯನನ್ನು ಟ್ರಾಫಿಕ್ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ರೀಲ್ಸ್ಗಾಗಿ ರಸ್ತೆ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವಾಹನ ಚಲಾಯಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಠಾಣೆಗೆ ಕರೆತಂದ ಬಳಿಕ ಕಾರಿನ ಮೇಲಿದ್ದ ಸುಮಾರು 3,400 ಲಿಪ್ಸ್ಟಿಕ್ ಗುರುತುಗಳನ್ನು ನೀರಿನಿಂದ ಸ್ವಚ್ಛಗೊಳಿಸುವಂತೆ ಯುವಕನಿಗೆ ಸೂಚಿಸಲಾಗಿದೆ. ಬಳಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ರಸ್ತೆ ಸುರಕ್ಷತೆಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ರೂ. 5,500 ದಂಡ ವಿಧಿಸಲಾಗಿದೆ. ರೀಲ್ಸ್ನಲ್ಲಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯುವ ಉತ್ಸಾಹದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದು ದುಬಾರಿ ಆಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ವೈರಲ್ ಆಗೋದು ಸುಲಭ, ಆದರೆ ಒಂದು ರೀಲ್ಸ್ಗಾಗಿ ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಕಾನೂನು ಕ್ರಮವನ್ನೂ ಎದುರಿಸಬೇಕಾಗಬಹುದು.