ಕಲಬುರಗಿ, ಆ. 21 (DaijiworldNews/AA): ಕೆಕೆಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರಿಗೆ ವಿದ್ಯಾರ್ಥಿ ಟಿಕೆಟ್ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಚಾಲಕ-ಕಂ-ಕಂಡಕ್ಟರ್ ಅನ್ನು ಅಮಾನತು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪನನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣ ಸಂಬಂಧ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ ಅವರು ತನಿಖೆ ನಡೆಸಿದ್ದರು.
ಕಳೆದ ಆಗಸ್ಟ್ 18 ರಂದು ಕಾಳಗಿ-ಕಲಬುರಗಿ-ಮಂಗಲಗಿ ಮಾರ್ಗದ ಬಸ್ನಲ್ಲಿ ಕರ್ತವ್ಯದ ಮೇಲಿದ್ದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದಾಗ, ತಮ್ಮ ಸುಪರ್ದಿಯಲ್ಲಿ ಇರಬೇಕಾಗಿದ್ದ ಇಟಿಎಂ ಯಂತ್ರವನ್ನು ಬಸ್ಸಿನಲ್ಲೇ ಬಿಟ್ಟು ತೆರಳಿದ್ದರು. ಈ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬ ಇಟಿಎಂ ಯಂತ್ರ ಬಳಸಿ ಇತರ ಪ್ರಯಾಣಿಕರಿಗೆ 11 ಟಿಕೆಟ್ಗಳನ್ನ ವಿತರಿಸಿದ್ದ.
ವಿದ್ಯಾರ್ಥಿ ಟಿಕೆಟ್ ವಿತರಿಸುತ್ತಿರುವ ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ನಿಗಮದ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ, ನೌಕರರ ಶಿಸ್ತು ನಿಯಮಾವಳಿಗಳ ಪ್ರಕಾರ ಸಿದ್ದಪ್ಪ ಅವರನ್ನು ಅಮಾನತು ಮಾಡಲಾಗಿದೆ.