ನವದೆಹಲಿ, ಆ. 21 (DaijiworldNews/AK): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ನೀಟ್ ಪ್ರತಿಭಟನೆಯ ವೇಳೆ ನಡೆದ ಪೆಲೆಟ್ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಸಂಸತ್ ರಸ್ತೆಯ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.

ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸಂತ್ರಸ್ತ ವಿದ್ಯಾರ್ಥಿ ಸಾಹಿಲ್ ಲೋಚಬ್ ಮತ್ತು ಆತನ ತಾಯಿಯೊಂದಿಗೆ ಪೊಲೀಸ್ ಠಾಣೆಯ ಹೊರಭಾಗದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು. ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಭಾಗಿಯಾದರು.
ರಾಹುಲ್ ಗಾಂಧಿ ಬೇಡಿಕೆಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮನವರಿಕೆ ಮಾಡಿದರು. ಪೊಲೀಸರ ಪ್ರತಿಕ್ರಿಯೆಗೆ ಜಗ್ಗದ ರಾಹುಲ್ ಗಾಂಧಿ ಎಫ್ಐಆರ್ ದಾಖಲಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ರಾಹುಲ್ ಪಟ್ಟು ಹಿಡಿದಿದ್ದಾರೆ.
“ನಾವು ವಿದ್ಯಾರ್ಥಿಗಳ ಪರ ನಿಲ್ಲುತ್ತೇವೆ. ನ್ಯಾಯಕ್ಕಾಗಿ ನಿಲ್ಲುತ್ತೇವೆ. ನಾವು ಸುಮ್ಮನಿರುವುದಿಲ್ಲ. ಎಫ್ಐಆರ್ ದಾಖಲಾಗುವವರೆಗೂ ಡಿಸಿಪಿ ಕಚೇರಿ ಮುಂದೆ ಧರಣಿ ಮುಂದುವರಿಯಲಿದೆ” ಎಂದು ಕಾಂಗ್ರೆಸ್ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಧರಣಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಜುಲೈ 20 ರಂದು ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಮೇಲೆ ಪೊಲೀಸರು ಪೆಲೆಟ್ ಗನ್ನಿಂದ ದಾಳಿ ನಡೆಸಿದ್ದಾರೆ. ಇದರಿಂದಾಗಿ ಆತನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು.
ನೀಲಿ ಬಣ್ಣದ ಮುಚ್ಚಳವಿದ್ದ ಸಣ್ಣ ಪ್ಲಾಸ್ಟಿಕ್ ಬಾಕ್ಸ್ನಲ್ಲಿದ್ದ ಪೆಲೆಟ್ಗಳನ್ನು ಅಂಗೈ ಮೇಲೆ ಹಾಕಿ ಮಾಧ್ಯಮಗಳಿಗೆ ತೋರಿಸಿದ ರಾಹುಲ್ ಗಾಂಧಿ, ಇವು ಪೆಲೆಟ್ಗಳು, ಇವುಗಳನ್ನು ಚೆನ್ನಾಗಿ ನೋಡಿ. ಇವು ಎಲ್ಲಿಂದ ಬಂದವು ಗೊತ್ತಾ? ಸಾಹಿಲ್ನ ದೇಹದಿಂದ ತೆಗೆದದ್ದು. ಆತನ ದೇಹದಲ್ಲಿ 200 ಕ್ಕೂ ಹೆಚ್ಚು ಪೆಲೆಟ್ ಚೂರುಗಳಿವೆ ಮತ್ತು ಕಣ್ಣಿನಲ್ಲಿ ಮೂರು ಚೂರುಗಳು ಸಿಲುಕಿಕೊಂಡಿವೆ ಎಂದು ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ಮತ್ತು ಏಮ್ಸ್ ನೀಡಿರುವ ವೈದ್ಯಕೀಯ ವರದಿಗಳನ್ನು ಪ್ರದರ್ಶಿಸಿದರು. ಪೊಲೀಸರು ಗುಂಡು ಹಾರಿಸಿಲ್ಲ ಎಂದಾದರೆ, ಬೇರೆ ಯಾರೋ ಹಾರಿಸಿರಬೇಕು. ಇಲ್ಲಿ ಅಪರಾಧ ನಡೆದಿರುವುದು ಸ್ಪಷ್ಟ. ನಾವು ಕೇವಲ ಎಫ್ಐಆರ್ ದಾಖಲಿಸಿ ಈ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.