ಚೆನ್ನೈ, ಆ. 21 (DaijiworldNews/TA): ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಆಳ್ವಾರ್ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕಲಾವಿದರ ಸಂಘದ ಅಧ್ಯಕ್ಷ ನಾಸರ್ ತಿಳಿಸಿದ್ದಾರೆ. ನಟಿಯ ಪಾರ್ಥಿವ ಶರೀರವನ್ನು ಸಾರ್ವಜನಿಕರು ಹಾಗೂ ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಚೆನ್ನೈನ ತೇನಾಂಪೇಟೆಯ ಸೇಂಟೋಫ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಇರಿಸಲಾಗುವುದು ಎಂದು ನಾಸರ್ ತಿಳಿಸಿದ್ದಾರೆ.

‘ಸಾಹುಕಾರ್’ ಎಂಬ ಹೆಸರು ಬಂದಿದ್ದು ಹೇಗೆ? : ಸಾಹುಕಾರ್ ಜಾನಕಿ ಅವರು 1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗಿನ ‘ಸಾಹುಕಾರು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅವರ ಹೆಸರಿನೊಂದಿಗೆ ‘ಸಾಹುಕಾರ್’ ಎಂಬ ಬಿರುದು ಶಾಶ್ವತವಾಗಿ ಉಳಿಯಿತು. 1952ರಲ್ಲಿ ಬಿಡುಗಡೆಯಾದ ‘ವಳಯಾಪತಿ’ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೂ ಪ್ರವೇಶಿಸಿದರು.
ಕನ್ನಡ ಚಿತ್ರರಂಗದಲ್ಲೂ ಅಚ್ಚಳಿಯದ ಛಾಪು : ಸಾಹುಕಾರ್ ಜಾನಕಿ ಅವರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ನಂಟಿತ್ತು. 1954ರ ‘ದೇವಕನ್ನಿಕಾ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಅವರು, 1959ರಲ್ಲಿ ಡಾ. ರಾಜ್ಕುಮಾರ್ ಅವರೊಂದಿಗೆ ನಟಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರದ ಮೂಲಕ ಕನ್ನಡಿಗರ ಮನದಲ್ಲೂ ವಿಶೇಷ ಸ್ಥಾನ ಪಡೆದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ತಮ್ಮ ವಿಭಿನ್ನ ಪಾತ್ರಗಳು ಹಾಗೂ ಅದ್ಭುತ ಅಭಿನಯದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು.
ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹ ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 94 ವರ್ಷದ ಹಿರಿಯ ಕಲಾವಿದೆಯ ನಿಧನದೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗದ ಒಂದು ಸುದೀರ್ಘ ಹಾಗೂ ಸ್ಮರಣೀಯ ಅಧ್ಯಾಯ ಅಂತ್ಯಗೊಂಡಂತಾಗಿದೆ.