ಮೈಸೂರು, ಆ. 21 (DaijiworldNews/TA): ವಿಶ್ವವಿಖ್ಯಾತ ಮೈಸೂರು ದಸರಾ 2026ರ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಆಗಮನದೊಂದಿಗೆ ದಸರಾ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಆಗಸ್ಟ್ 26ರಂದು ಗಜಪಯಣ ನಡೆಯಲಿದ್ದು, ಈ ಮೂಲಕ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭವಾಗಲಿವೆ. ಹುಣಸೂರು ತಾಲೂಕಿನ ನಾಗರಹೊಳೆಯ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ವೀರನಹೊಸಳ್ಳಿಯಿಂದ ಗಜಪಡೆಗಳನ್ನು ಮೈಸೂರಿಗೆ ಕರೆತರಲಾಗುತ್ತದೆ.

ಕಾಡಿನಿಂದ ನಾಡಿಗೆ ಆಗಮಿಸುವ ಆನೆಗಳಿಗೆ ವೀರನಹೊಸಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಗಜಪೂಜೆ ನೆರವೇರಿಸಿ ಸ್ವಾಗತಿಸಲಾಗುತ್ತದೆ. ಬಳಿಕ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಕರೆತರಲಾಗುತ್ತದೆ. ಎರಡು ದಿನಗಳ ವಿಶ್ರಾಂತಿಯ ನಂತರ ಗಜಪಡೆಗಳು ಮೈಸೂರು ಅರಮನೆ ಆವರಣ ಪ್ರವೇಶಿಸಲಿದ್ದು, ಜಂಬೂಸವಾರಿಗಾಗಿ ವಿಶೇಷ ತರಬೇತಿ ಹಾಗೂ ಸಿದ್ಧತೆಗಳನ್ನು ಆರಂಭಿಸಲಿವೆ.
2026ರ ಮೈಸೂರು ದಸರಾಕ್ಕಾಗಿ ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ 12 ಆನೆಗಳು ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸಲಿದ್ದು, ಎರಡು ಆನೆಗಳನ್ನು ಮೀಸಲು ಆನೆಗಳಾಗಿ ಇರಿಸಲಾಗಿದೆ. ಮೊದಲ ಹಂತದಲ್ಲಿ ದುಬಾರೆ, ಬಳ್ಳೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಂದ ಒಟ್ಟು ಒಂಬತ್ತು ಆನೆಗಳು ಆಗಸ್ಟ್ 26ರಂದು ಮೈಸೂರಿಗೆ ಆಗಮಿಸಲಿವೆ.
ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಮತ್ತು ಕಾವೇರಿ, ಬಳ್ಳೆ ಶಿಬಿರದಿಂದ ಮಹೇಂದ್ರ ಮತ್ತು ಲಕ್ಷ್ಮಿ, ಮತ್ತಿಗೋಡು ಶಿಬಿರದಿಂದ ಏಕಲವ್ಯ ಮೊದಲ ಹಂತದಲ್ಲಿ ಮೈಸೂರಿಗೆ ಬರಲಿದ್ದಾರೆ. ಎರಡನೇ ಹಂತದಲ್ಲಿ ದೊಡ್ಡ ಅರವೆ ಶಿಬಿರದ ರೂಪಾ, ರಾಮಾಪುರ (ಬಂಡೀಪುರ) ಶಿಬಿರದ ಚೈತ್ರಾ ಹಾಗೂ ಮತ್ತಿಗೋಡು ಶಿಬಿರದ ಶ್ರೀಕಂಠ ಮೈಸೂರಿಗೆ ಆಗಮಿಸಲಿದ್ದಾರೆ. 57 ವರ್ಷದ ಶ್ರೀಕಂಠ ಈ ಬಾರಿ ದಸರಾ ಗಜಪಡೆಯಲ್ಲಿ ಭಾಗವಹಿಸಲಿರುವ ಅತ್ಯಂತ ಹಿರಿಯ ಆನೆಯಾಗಿದೆ.
ಮೈಸೂರು ದಸರಾ ಅಭಿಮಾನಿಗಳಲ್ಲಿ ವಿಶೇಷ ಜನಪ್ರಿಯತೆ ಗಳಿಸಿರುವ ಭೀಮ ಆನೆ ಈ ಬಾರಿ ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. 26 ವರ್ಷದ ಭೀಮನಿಗೆ ಮದ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆತನನ್ನು ಮೀಸಲು ಆನೆಯಾಗಿ ಇರಿಸಲಾಗಿದೆ. ಜನರೊಂದಿಗೆ ಸ್ನೇಹಪರವಾಗಿ ವರ್ತಿಸುವ ಭೀಮ, ರಸ್ತೆಯಲ್ಲಿ ತನ್ನ ಹೆಸರನ್ನು ಕೂಗಿದಾಗ ತಿರುಗಿ ಪ್ರತಿಕ್ರಿಯಿಸುವ ಮೂಲಕವೂ ಜನರ ಗಮನ ಸೆಳೆದಿದ್ದ. ಆದರೆ ಈ ಬಾರಿ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಭೀಮನನ್ನು ಜಂಬೂಸವಾರಿಯಿಂದ ದೂರ ಇರಿಸಲಾಗಿದೆ. ದುಬಾರೆ ಶಿಬಿರದ 51 ವರ್ಷದ ಹರ್ಷ ಆನೆಯನ್ನೂ ಮೀಸಲು ಪಟ್ಟಿಯಲ್ಲಿ ಇರಿಸಲಾಗಿದ್ದು, ಮುಖ್ಯ ಗಜಪಡೆಯಲ್ಲಿರುವ ಯಾವುದೇ ಆನೆಗೆ ತೊಂದರೆ ಎದುರಾದರೆ ಈ ಮೀಸಲು ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ಗಜಪಡೆಗಳು ಮೈಸೂರಿಗೆ ಆಗಮಿಸಿದ ಬಳಿಕ ಅವುಗಳನ್ನು ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ವಿಶೇಷ ಆರೈಕೆ ಮಾಡಲಾಗುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್, ಪೌಷ್ಟಿಕ ಆಹಾರ ಹಾಗೂ ಜಂಬೂಸವಾರಿಗೆ ಅಗತ್ಯವಿರುವ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಆನೆಗಳ ಆರೋಗ್ಯ, ಸುರಕ್ಷತೆ ಮತ್ತು ತರಬೇತಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅಕ್ಟೋಬರ್ 11ರಂದು ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದ್ದು, ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ. ಗಜಪಡೆಯ ಆಗಮನದೊಂದಿಗೆ ಮೈಸೂರಿನಲ್ಲಿ ದಸರಾ ಸಂಭ್ರಮ ಅಧಿಕೃತವಾಗಿ ಕಳೆಗಟ್ಟಲಿದೆ.