ದೆಹಲಿ, ಆ. 21 (DaijiworldNews/AA): ರಾಹುಲ್ ಗಾಂಧಿ ತನ್ನ ರೋಲ್ ಮಾಡೆಲ್ ಎಂದು ವರ ಹೇಳಿದ ಕಾರಣಕ್ಕೆ ವಾರ್ಷಿಕ 40 ಲಕ್ಷ ರೂಪಾಯಿ ಪ್ಯಾಕೇಜ್ ಹೊಂದಿದ್ದ ಆತನ ಮದುವೆ ಪ್ರಸ್ತಾಪವನ್ನು ಯುವತಿಯೋರ್ವಳು ರಿಜೆಕ್ಟ್ ಮಾಡಿದ್ದಾಳೆ.

ಈ ಬಗ್ಗೆ 'ಆರುಹಿ ರೆಡ್ಡಿ' ಎಂಬ ಯುವತಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. "ನನಗೆ ಇತ್ತೀಚೆಗೆ ಮದುವೆ ಪ್ರಸ್ತಾಪವೊಂದು ಬಂದಿತ್ತು. ಆ ಯುವಕ ನೋಡಲು ಸುಂದರವಾಗಿದ್ದ, ವಾರ್ಷಿಕ 40 ಲಕ್ಷ ರೂ. ಆಕರ್ಷಕ ಪ್ಯಾಕೇಜ್ ಮತ್ತು ಉತ್ತಮ ಕುಟುಂಬದ ಹಿನ್ನೆಲೆ ಹೊಂದಿದ್ದ. ಆದರೆ ನಾನು ಆತನನ್ನು ಒಂದೇ ಕಾರಣಕ್ಕೆ ತಿರಸ್ಕರಿಸಿದೆ. ಆತನ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತನ್ನ 'ರೋಲ್ ಮಾಡೆಲ್' ಎಂದು ಬರೆದುಕೊಂಡಿದ್ದ" ಎಂದು ಯುವತಿ ತಿಳಿಸಿದ್ದಾಳೆ.
"ನಾನೊಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ. ಸೋಲುಣ್ಣುವ ವ್ಯಕ್ತಿಯನ್ನು ತನ್ನ ಆದರ್ಶ ಎಂದು ಭಾವಿಸುವ ವ್ಯಕ್ತಿಯನ್ನು ನನ್ನ ಜೀವನಸಂಗಾತಿಯಾಗಿ ಸ್ವೀಕರಿಸಲು ಸಾಧ್ಯವೇ ಇಲ್ಲ. ನನಗೆ ಹಣ, ಸಂಪತ್ತಿಗಿಂತ ನನ್ನ ದೇಶ ಮುಖ್ಯ" ಎಂದು ಪೋಸ್ಟ್ ಮಾಡಿದ್ದಾಳೆ. ಇನ್ನು ಕಾಮೆಂಟ್ ವಿಭಾಗದಲ್ಲಿ ತನಗೆ ಕಳೆದ ತಿಂಗಳಷ್ಟೇ 18 ವರ್ಷ ತುಂಬಿರುವುದಾಗಿ ಯುವತಿ ಹೇಳಿದ್ದಾಳೆ.
ಇದೀಗ ರಾಹುಲ್ ಗಾಂಧಿಯ ವಿಚಾರಕ್ಕೆ ಯುವತಿ ವರನನ್ನು ತಿರಸ್ಕರಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ಈ ಪೋಸ್ಟ್ ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಯುವತಿಯ ವೈಯಕ್ತಿಕ ನಿಲುವು ಮತ್ತು ಸಿದ್ಧಾಂತವನ್ನು ಬೆಂಬಲಿಸಿದ್ದಾರೆ. ಆದರೆ ಕೆಲವರು ಕೆಲವರು 'ರಾಜಕೀಯ ವಿಚಾರಗಳನ್ನು ಜೀವನಸಂಗಾತಿಯ ಆಯ್ಕೆಗೆ ತರುವುದು ಸರಿಯಲ್ಲ' ಎಂದು ಕಿವಿಮಾತು ಹೇಳಿದ್ದಾರೆ.