ತ್ರಿಶೂರ್, ಆ. 21 (DaijiworldNews/TA): ಸ್ಕಾಟ್ಲೆಂಡ್ನ ಮಾಜಿ ಸಂಸತ್ ಸದಸ್ಯ ಮಾರ್ಟಿನ್ ಡೇ ಮತ್ತು ಪಿರವಂ ಮೂಲದ ನಿಧಿನ್ ಚಂದ್ ಗುರುವಾಯೂರಿನಲ್ಲಿ ವಿವಾಹವಾಗಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ ಆಪ್ತ ಸಂಬಂಧಿಕರು, ಸ್ನೇಹಿತರು ಹಾಗೂ ನಿಧಿನ್ ಅವರ 22 ವರ್ಷದ ಪುತ್ರ ವೇದಿಕ್ ಶಂಕರ್ ಭಾಗವಹಿಸಿದ್ದರು. ಪುಷ್ಪಾಂಜಲಿ ಸಭಾಂಗಣದಲ್ಲಿ ವಿವಾಹದ ಬಳಿಕದ ಕಾರ್ಯಕ್ರಮಗಳು ನಡೆದಿದ್ದು, ಸಮಾರಂಭದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಿಧಿನ್ ಚಂದ್ ಅವರು 2008ರಲ್ಲಿ ಐಟಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಕೆಗೆ ತೆರಳಿದ್ದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ನಿಧಿನ್, ನಿವೃತ್ತ ಪಶುವೈದ್ಯಕೀಯ ಕ್ಷೇತ್ರ ಅಧಿಕಾರಿ ಕೆ.ಎನ್. ಚಾಂಡಿ ಮತ್ತು ಪಂಬಕ್ಕುಡ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ರಾಜಿ ಅವರ ಪುತ್ರಿ.
ಪಿಎಚ್ಡಿ ಪೂರ್ಣಗೊಳಿಸಿದ ಬಳಿಕ ಯುಕೆಯಲ್ಲಿ ವಾಸಿಸುತ್ತಿದ್ದ ವೇಳೆ ವೀಸಾ ನಿಯಮಗಳಲ್ಲಿ ಬದಲಾವಣೆಯಾಗಿ ನಿಧಿನ್ ಅವರ ವೀಸಾ ರದ್ದುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ವೀಸಾ ಸ್ಥಿತಿಗೆ ಸಂಬಂಧಿಸಿದ ವಿಚಾರವನ್ನು ಬ್ರಿಟನ್ನ ಸಂಸದೀಯ ಸಮಿತಿಗಳ ಗಮನಕ್ಕೆ ತರಲು ಸಕ್ರಿಯವಾಗಿ ಪ್ರಯತ್ನಿಸಿದ್ದರು. ಇದೇ ಸಂದರ್ಭದಲ್ಲಿ ಆಗ ಯುಕೆ ಸಂಸದರಾಗಿದ್ದ ಮಾರ್ಟಿನ್ ಡೇ ಅವರನ್ನು ಭೇಟಿಯಾದರು.
2016ರ ಫೆಬ್ರವರಿಯಲ್ಲಿ ಮಾರ್ಟಿನ್ ಮತ್ತು ನಿಧಿನ್ ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಆಪ್ತ ಸ್ನೇಹಿತರಾಗಿದ್ದ ಇವರಿಬ್ಬರ ಸಂಬಂಧ ಬಳಿಕ ಪ್ರೀತಿಗೆ ತಿರುಗಿತು. ಸುಮಾರು ಎರಡು ತಿಂಗಳ ಡೇಟಿಂಗ್ ಬಳಿಕ ಮಾರ್ಟಿನ್ ತಮ್ಮ ಪ್ರೀತಿಯನ್ನು ನಿಧಿನ್ಗೆ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ನಿಧಿನ್ ವಿಚ್ಛೇದಿತರಾಗಿದ್ದು, 12 ವರ್ಷದ ಮಗುವಿನ ತಾಯಿಯಾಗಿದ್ದರು. ಉದ್ಯೋಗ ಹಾಗೂ ವೀಸಾ ಸ್ಥಿತಿಯಲ್ಲೂ ಅನಿಶ್ಚಿತತೆ ಎದುರಾಗಿತ್ತು. ಆದರೂ ಮಾರ್ಟಿನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ನಿಧಿನ್ ಅವರನ್ನು ತಮ್ಮ ಪೋಷಕರಾದ ಮಾರ್ಗರೇಟ್ ಡೇ ಮತ್ತು ರಾನ್ ಡೇ ಅವರಿಗೆ ಪರಿಚಯಿಸಿದರು.
ನಂತರ ನಿಧಿನ್ ತಮ್ಮ ಪುತ್ರ ವೇದಿಕ್ ಜೊತೆ ಯುಕೆಗೆ ತೆರಳಿದರು. ಪ್ರಸ್ತುತ ನಿಧಿನ್ ನಿರ್ವಹಣಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಪರವಾಗಿ ಪ್ರಚಾರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇದೀಗ ಹಲವು ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ಗುರುವಾಯೂರಿನಲ್ಲಿ ವಿವಾಹದ ಮೂಲಕ ಹೊಸ ಅಧ್ಯಾಯ ಆರಂಭವಾಗಿದ್ದು, ಈ ಜೋಡಿಯ ವಿವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.