ಮುಂಬೈ, ಆ. 21 (DaijiworldNews/TA): ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಲೆಯ ನಿರ್ವಹಣೆ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

‘ಸ್ಕೂಲ್ ಠೀಕ್ ಕರೋ’ ಸಾಮಾಜಿಕ ಅಭಿಯಾನದ ಭಾಗವಾಗಿ ಶಾಲೆಗೆ ಭೇಟಿ ನೀಡಿದ ದೀಪ್ಕೆ, ಶಾಲಾ ತರಗತಿಗಳಲ್ಲಿ ಹಾಜರಾತಿ ಹೆಚ್ಚಾಗಿ ತೋರಿಸಲು ಇತರ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕರೆತಂದು ಕೂರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಸಂವಾದದಲ್ಲಿ ಕೆಲವು ಮಕ್ಕಳು ತಾವು ಈ ಶಾಲೆಯ ವಿದ್ಯಾರ್ಥಿಗಳಲ್ಲ ಎಂದು ಹೇಳಿರುವುದು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಾಲಾ ಆವರಣದಲ್ಲಿ ಮದ್ಯದ ಖಾಲಿ ಬಾಟಲಿಗಳು ಪತ್ತೆಯಾಗಿರುವುದನ್ನೂ ಅವರು ಪ್ರಶ್ನಿಸಿದ್ದು, ಶಾಲಾ ಪರಿಸರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಶಾಲೆಯಲ್ಲಿ ಕುಡಿಯುವ ನೀರು ಮತ್ತು ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ ದೀಪ್ಕೆ, ತಮ್ಮ ಭೇಟಿ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರದರ್ಶನಕ್ಕಾಗಿ ಹೊಸ ಊಟದ ತಟ್ಟೆಗಳನ್ನು ತರಲಾಗಿತ್ತು ಹಾಗೂ ಶೌಚಾಲಯಗಳನ್ನು ತರಾತುರಿಯಲ್ಲಿ ಸ್ವಚ್ಛಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ಆದರೆ ದೀಪ್ಕೆ ಅವರ ಆರೋಪಗಳನ್ನು ಶಾಲೆಯ ಮುಖ್ಯಶಿಕ್ಷಕ ಬಾಲಾಜಿ ಗವಾಲಿ ನಿರಾಕರಿಸಿದ್ದಾರೆ. ಒಂದೇ ಕಟ್ಟಡದಲ್ಲಿ ಮರಾಠಿ ಹಾಗೂ ಉರ್ದು ಮಾಧ್ಯಮದ ಎರಡು ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ತರಗತಿಗಳಲ್ಲಿದ್ದ ಮಕ್ಕಳೆಲ್ಲರೂ ಶಾಲೆಯ ನಿಯಮಿತ ವಿದ್ಯಾರ್ಥಿಗಳೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಕ್ಕಳು ಎಂದಿನಂತೆ ಶಾಲೆಯ ತಟ್ಟೆಗಳಲ್ಲೇ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯೂ ಸಮರ್ಥಿಸಿಕೊಂಡಿದೆ. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಕುರಿತು ಪ್ರಶ್ನಿಸಿರುವ ಅಭಿಜೀತ್ ದೀಪ್ಕೆ, ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಸುರಕ್ಷತೆ, ಮಧ್ಯಾಹ್ನದ ಬಿಸಿಯೂಟ, ಶೌಚಾಲಯ, ಕುಡಿಯುವ ನೀರು ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ 10 ಪ್ರಮುಖ ಅಂಶಗಳನ್ನು ಪರಿಶೀಲಿಸುವ ಆಡಿಟ್ ಮಾದರಿಯನ್ನು CJP ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ. ಶಾಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಬ್ಲಾಕ್ ಶಿಕ್ಷಣ ಅಧಿಕಾರಿಗಳನ್ನು 8 ದಿನಗಳೊಳಗೆ ಅಮಾನತು ಮಾಡಬೇಕು ಎಂದು ಸರ್ಕಾರಕ್ಕೆ ಗಡುವು ನೀಡಲಾಗಿದೆ. ಜೊತೆಗೆ ಸೋರುವ ಶಾಲಾ ಛಾವಣಿಗಳು ಹಾಗೂ ಬೆಂಚುಗಳ ಕೊರತೆಯಂತಹ ಮೂಲಭೂತ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಲಾಗಿದೆ. ಶಾಲೆಯ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ತನಿಖೆ ಬಳಿಕವೇ ನಿಖರ ಚಿತ್ರಣ ಹೊರಬರಬೇಕಿದೆ.