ನವದೆಹಲಿ, ಆ. 21 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಮಹತ್ವದ ಸಭೆ ನಡೆಸಿದರು.

ನವದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದ ಪ್ರಧಾನಿ ನಿವಾಸದಲ್ಲಿ ಈ ಸಭೆ ನಡೆಯಿತು. ಕೇವಲ ಇಂದಿನ ಸಮಸ್ಯೆಗಳಿಗೆ ಸೀಮಿತವಾಗದೆ, ಭವಿಷ್ಯದ ಭಾರತವನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದರು.
ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡುವ ಬದಲು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಕೋವಿಡ್ ಸಾಂಕ್ರಾಮಿಕ ಹಾಗೂ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದಲ್ಲಿ ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದ ರೀತಿಯಲ್ಲೇ ಸದಾ ಕಾರ್ಯನಿರ್ವಹಿಸಲು ಕರೆ ನೀಡಿದರು. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಬೆರೆತು ಬಲಿಷ್ಠ ಆಡಳಿತ ಜಾಲವನ್ನು ನಿರ್ಮಿಸಲು ಪ್ರೋತ್ಸಾಹಿಸಿದರು.
ಡೇಟಾ ದೇಶದ ಪ್ರಮುಖ ಸಂಪನ್ಮೂಲವಾಗಿದೆ. ಎಲ್ಲಾ ಇಲಾಖೆಗಳ ದತ್ತಾಂಶ ವೇದಿಕೆಗಳನ್ನು ಒಂದೇ ವ್ಯವಸ್ಥೆಯಡಿ ತಂದು ನೀತಿ ನಿರೂಪಣೆಗೆ ಬಳಸಬೇಕು. ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆಯನ್ನು (AI) ಹೆಚ್ಚಾಗಿ ಬಳಸಬೇಕು. ಆದರೆ ಅಂತಿಮ ನಿರ್ಧಾರಗಳಲ್ಲಿ ಮಾನವ ಅನುಭವ ಮತ್ತು ವಿವೇಚನೆಗೆ ಮೊದಲ ಆದ್ಯತೆ ಇರಬೇಕು.