ಅಮರಾವತಿ, ,ಆ. 20 (DaijiworldNews/AK): ಆಚೆ ಬರುತ್ತಿದ್ದಾಗಲೇ ಲಿಫ್ಟ್ ಕೆಳಗೆ ಹೋದ ಪರಿಣಾಮ ಮಹಿಳೆಯೋರ್ವರು ಮಧ್ಯದಲ್ಲಿ ಸಿಲುಕಿ ದುರಂತವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.

ಭಾನುವಾರ (ಆ.16) ಈ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅವಘಡದಲ್ಲಿ 50 ವರ್ಷದ ವನಿತಾ ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಮೃತ ಮಹಿಳೆ, ಮಗಳು ಹಾಗೂ ಮೊಮ್ಮಗ ಲಿಫ್ಟ್ನಿಂದ ಆಚೆ ಬರುತ್ತಿದ್ದರು. ಮೊದಲು ಮಗಳು ಹಾಗೂ ಮೊಮ್ಮಗ ಸುರಕ್ಷಿತವಾಗಿ ಆಚೆ ಬಂದಿದ್ದರು. ಕೊನೆಯದಾಗಿ ವನಿತಾ ಅವರು ಲಿಫ್ಟ್ನಿಂದ ಆಚೆ ಬರುತ್ತಿದ್ದಾಗ ಏಕಾಏಕಿ ಬಾಗಿಲು ಓಪನ್ ಇಟ್ಟುಕೊಂಡೇ ಲಿಫ್ಟ್ ಕೆಳಗೆ ಹೋಗಿದೆ. ಪರಿಣಾಮ ವನಿತಾ ಅವರು ಮಧ್ಯದಲ್ಲಿ ಸಿಲುಕಿಕೊಂಡಿದ್ದರು.
ಗಾಬರಿಗೊಂಡ ಮಗಳು ತಾಯಿಯನ್ನು ಹೊರಗೆಳೆಯಲೆತ್ನಿಸಿದರೂ ಕೂಡ ಆಗಲಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ನಿವಾಸಿಗಳು ಅವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವನಿತಾ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿನ ಲಿಫ್ಟ್ ಸುರಕ್ಷತೆ, ನಿರ್ವಹಣೆ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಿಫ್ಟ್ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಅಂಶಗಳ ಪಾಲನೆಯಾಗುತ್ತಿತ್ತಾ ಅಥವಾ ಯಾವುದೇ ನಿರ್ಲಕ್ಷ್ಯ, ತಾಂತ್ರಿಕ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.