ನವದೆಹಲಿ, ,ಆ. 20 (DaijiworldNews/AK): ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದಿರಲು ನಿರ್ಣಯ ಕೈಗೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ನ ಈ ನಿರ್ಧಾರವು ದೇಶವಿರೋಧಿ ಹಾಗೂ ಕೇವಲ ಮತ ಬ್ಯಾಂಕ್ಗಾಗಿ ಮಾಡುತ್ತಿರುವ ತುಷ್ಟೀಕರಣ ರಾಜಕೀಯ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಲುವನ್ನು ತೀವ್ರವಾಗಿ ಖಂಡಿಸಿದರು.
1937 ರಲ್ಲಿ ವಂದೇ ಮಾತರಂನ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತ್ತು. ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತದೇ ತಪ್ಪನ್ನು ಮಾಡುತ್ತಿದೆ ಎಂದು ಶಾ ಕಿಡಿಕಾರಿದ್ದಾರೆ.
ಸಂಪೂರ್ಣ ಆರು ಚರಣಗಳ ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸುವ ಮೂಲಕ, ಗೀತೆ ರಚಿಸಿದ ಬಂಕಿಮ್ ಚಂದ್ರ ಚಟರ್ಜಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತ್ಯಾಗ ಮಾಡಿದ ಲಕ್ಷಾಂತರ ವೀರರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸಿದರು.