ನಲ್ಗೊಂಡ, ಆ. 20 (DaijiworldNews/TA): ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಕ್ಕೆ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಐಷಾರಾಮಿ ಜೀವನಶೈಲಿ ಹಾಗೂ ದುಬಾರಿ ವಸ್ತುಗಳ ಆಸೆಗೆ ಬಿದ್ದಿದ್ದ ವಿದ್ಯಾರ್ಥಿಗಳು, ತಮ್ಮ ಅಕ್ರಮ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದಾಗಿ ಎಚ್ಚರಿಸಿದ್ದ ಶಿಕ್ಷಕಿಯನ್ನೇ ಗುರಿಯಾಗಿಸಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಒಂದೇ ಹಾಸ್ಟೆಲ್ ಕೊಠಡಿಯಲ್ಲಿ ವಾಸಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಐಫೋನ್, ಬೈಕ್ ಸೇರಿದಂತೆ ದುಬಾರಿ ವಸ್ತುಗಳ ಖರೀದಿಗೆ ಹಣದ ಅವಶ್ಯಕತೆ ಹೊಂದಿದ್ದರು ಎನ್ನಲಾಗಿದೆ. ಹಾಸ್ಟೆಲ್ ತಪಾಸಣೆ ವೇಳೆ ಅವರ ಬ್ಯಾಗ್ನಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್ ಪತ್ತೆಯಾಗಿತ್ತು. ಈ ವೇಳೆ ಶಿಕ್ಷಕಿ ರೂಪಾ ರೆಡ್ಡಿ ಇಬ್ಬರು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡು, ಈ ವಿಚಾರವನ್ನು ಪೋಷಕರಿಗೆ ತಿಳಿಸುವುದಾಗಿ ಎಚ್ಚರಿಸಿದ್ದರು.
ಇದೇ ವಿಚಾರವೇ ವಿದ್ಯಾರ್ಥಿಗಳಲ್ಲಿ ಶಿಕ್ಷಕಿಯ ವಿರುದ್ಧ ದ್ವೇಷಕ್ಕೆ ಕಾರಣವಾಗಿ ಕೊಲೆ ಸಂಚು ರೂಪಿಸಲು ಪ್ರೇರೇಪಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸುಮಾರು ಒಂದು ವಾರದ ಹಿಂದಿನಿಂದಲೇ ಶಿಕ್ಷಕಿಯ ಮನೆಯ ಸುತ್ತ ಕಣ್ಗಾವಲು ಇರಿಸಿದ್ದರು ಎನ್ನಲಾಗಿದೆ. ಬಳಿಕ ಚಾಕು, ಮುಖವಾಡ ಹಾಗೂ ಕೈಗವಸುಗಳನ್ನು ಖರೀದಿಸಿ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿದ್ದಾರೆ.
ಶಿಕ್ಷಕಿ ಕೊನೆಯದಾಗಿ ತಮ್ಮ ಚಿಕ್ಕಮ್ಮನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಫೋನ್ ಸ್ವಿಚ್ ಆಫ್ ಆಗುವ ಮುನ್ನ ಅವರು ‘ಬಾಬು’ ಎಂಬ ಪದವನ್ನು ಉಚ್ಚರಿಸಿದ್ದರು ಎನ್ನಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ‘ಬಾಬು’ ಎಂದು ಕರೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ವೇಳೆ ಶಾಲಾ ವಿದ್ಯಾರ್ಥಿಗಳ ಮೇಲೂ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಿದರು.
ಡೊನಿಯಾಲ ಎಕ್ಸ್ರೋಡ್ ಬಳಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಬಾಲಕರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ, ಅವರ ಬಳಿ ಇದ್ದ ನೋಟುಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ನಂತರ ವಿಚಾರಣೆ ನಡೆಸಿದಾಗ ಪ್ರಕರಣದ ಸುಳಿವು ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ಆರೋಪಿಗಳಿಂದ ರೂ. 1.54 ಲಕ್ಷ ನಗದು, ರಕ್ತಸಿಕ್ತ ಚಾಕು, ಕೈಗವಸುಗಳು ಹಾಗೂ ಕದ್ದ ಹಣದಲ್ಲಿ ಸುಮಾರು ರೂ. 60 ಸಾವಿರ ನೀಡಿ ಖರೀದಿಸಿದ್ದ ಹೊಸ ಐಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಲ್ಗೊಂಡ ಎಸ್ಪಿ ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿನ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿಗಳ ಜಾಡು ಪತ್ತೆಹಚ್ಚಲಾಗಿದೆ. ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಐಫೋನ್, ಬೈಕ್ ಸೇರಿದಂತೆ ದುಬಾರಿ ವಸ್ತುಗಳ ಮೇಲಿನ ವ್ಯಾಮೋಹ ಹಾಗೂ ಸುಲಭವಾಗಿ ಹಣ ಸಂಪಾದಿಸುವ ಆಸೆಯಿಂದ ಇಬ್ಬರು ವಿದ್ಯಾರ್ಥಿಗಳು ಅಪರಾಧದ ಹಾದಿ ತುಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಹಣ ಸಂಪಾದಿಸುವ ಮಾರ್ಗಗಳನ್ನು ಹುಡುಕುತ್ತಿದ್ದ ವಿದ್ಯಾರ್ಥಿಗಳು, ಕೊನೆಗೆ ಶಿಕ್ಷಕಿಯ ಹತ್ಯೆಯಂತಹ ಭೀಕರ ಕೃತ್ಯಕ್ಕೆ ಮುಂದಾಗಿರುವುದು ಪೋಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ಗಂಭೀರ ಕಳವಳ ಮೂಡಿಸಿದೆ.
ಅಪ್ರಾಪ್ತ ವಯಸ್ಸಿನಲ್ಲೇ ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ದುಬಾರಿ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗಿ ಹಿಂಸಾತ್ಮಕ ದಾರಿ ತುಳಿಯುತ್ತಿರುವ ಪ್ರಕರಣಗಳ ಬಗ್ಗೆ ಪೋಷಕರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.