ಚಾಮರಾಜನಗರ, ಆ. 20 (DaijiworldNews/TA): ಮೂವರು ಬೇಟೆಗಾರರ ಎನ್ಕೌಂಟರ್ ಘಟನೆಯ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕಾಡು ಪ್ರದೇಶಗಳಲ್ಲಿ ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದೆ. ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ಅರಣ್ಯ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಸುಮಾರು 10 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ, ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಕೃತ್ಯ ಎಸಗುತ್ತಿರುವ ಆರೋಪ ಕೇಳಿಬಂದಿದೆ. ಕೆಲವೇ ದಿನಗಳ ಹಿಂದೆ ಕಾವೇರಿ ವನ್ಯಜೀವಿಧಾಮದ ಕಳ್ಳಬೇಟೆ ತಡೆ ಶಿಬಿರಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಜಿಲೆಟಿನ್ ಕಡ್ಡಿಗಳನ್ನು ಬಳಸಿ ನಾಲ್ಕು ಎಪಿಸಿ ಕ್ಯಾಂಪ್ಗಳನ್ನು ಸ್ಫೋಟಿಸಿ ಧ್ವಂಸ ಮಾಡಲಾಗಿತ್ತು.
ಮೂವರು ಬೇಟೆಗಾರರ ಎನ್ಕೌಂಟರ್ ಬಳಿಕ ಕಾಡಿನಲ್ಲಿ ದುಷ್ಕರ್ಮಿಗಳ ಚಟುವಟಿಕೆ ಹೆಚ್ಚಾಗಿದೆ ಎನ್ನಲಾಗುತ್ತಿದ್ದು, ಅರಣ್ಯ ಸಿಬ್ಬಂದಿ ಇದೀಗ ಪ್ರಾಣಭಯದಲ್ಲೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಎಸಿಎಫ್ ವಿಜಯ್ ಹೊಸೂರು ಅವರ ಮಾಹಿತಿ ಪ್ರಕಾರ, ಅರಣ್ಯಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಲಾಗಿದೆ. ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿರುವುದು ಹಾಗೂ ಅರಣ್ಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕೃತ್ಯಗಳ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.