ಮಧ್ಯಪ್ರದೇಶ, ಆ. 20 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 17ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಚಿತ್ವನ್ ಜೈನ್ ಅವರ ಯಶೋಗಾಥೆ ಇದು.

ಚಿತ್ವನ್ ಜೈನ್ ಅವರು ಮಧ್ಯಪ್ರದೇಶದ ಅಶೋಕನಗರ ಮೂಲದವರು. ನಗರದ ಸೋನಿ ಕಾಲೋನಿ ನಿವಾಸಿ ಹಾಗೂ ಉದ್ಯಮಿ ಮನೀಷ್ ಜೈನ್ ಅವರ ಹಿರಿಯ ಪುತ್ರ ಚಿತ್ವನ್. ಸರಳವಾದ ಅವಿಭಕ್ತ ಕುಟುಂಬದಲ್ಲಿ ಬೆಳೆದ ಅವರು ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು.
ಚಿತ್ವನ್ ಜೈನ್ ಅವರು ಅಶೋಕನಗರದ ಖಾಸಗಿ ಶಾಲೆಯಲ್ಲಿ 10ನೇ ತರಗತಿವರೆಗೆ ಶಿಕ್ಷಣ ಪಡೆದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಭೋಪಾಲ್ಗೆ ತೆರಳಿದರು. ಅಲ್ಲಿ 12ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿದರು. ಶಾಲಾ ಶಿಕ್ಷಣದ ಬಳಿಕ ಚಿತ್ವನ್ ದೆಹಲಿಗೆ ತೆರಳಿದ ಅವರು, ಬಿ.ಕಾಂ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಪದವಿ ಪೂರ್ಣಗೊಂಡ ಕೂಡಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಆದರೆ ಚಿತ್ವನ್ ಅವರ ಯುಪಿಎಸ್ಸಿ ಪಯಣ ಸುಲಭವಾಗಿರಲಿಲ್ಲ. ಆರಂಭದಲ್ಲಿ ಅವರು ಎರಡು ಬಾರಿ ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾದರೂ ಎರಡೂ ಬಾರಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಆದರೂ ಅವರು ತಮ್ಮ ಪ್ರಯತ್ನವನ್ನು ಕೈಬಿಡದೇ 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದರು. ಅಂತಿಮವಾಗಿ ಅವರು 17ನೇ ಅಖಿಲ ಭಾರತ ರ್ಯಾಂಕ್ ಪಡೆದು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಅವರು ದೇಶಾದ್ಯಂತ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಸಂಖ್ಯಾತ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.