ಚೆನ್ನೈ, ಆ. 19 (DaijiworldNews/AA): ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ತಮಿಳು ರಾಜ್ಯ ಗೀತೆ ಹಾಡಲು ಮದ್ರಾಸ್ ಹೈಕೋರ್ಟ್ ಅನುಮತಿಸಿದೆ. ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯು ಪ್ರಕಾರ ರಾಜ್ಯ ಗೀತೆಯನ್ನು ಕೊನೆಯ ಸ್ಥಾನಕ್ಕೆ ತಳ್ಳುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು ರಾಜ್ಯ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳುವ ದೀರ್ಘಕಾಲದ ಸಂಪ್ರದಾಯವಿದೆ. ಜ.28ರಂದು ಹೊರಡಿಸಲಾದ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯ ಪ್ರಕಾರ, ಸರ್ಕಾರದ ಕಾರ್ಯಕ್ರಮಗಳು ವಂದೇ ಮಾತರಂದೊಂದಿಗೆ ಆರಂಭವಾಗಬೇಕು ಎಂದಿರುವುದನ್ನು ಪ್ರಶ್ನಿಸಿ, ರದ್ದುಗೊಳಿಸುವಂತೆ ಕೋರಿ ಚೆನ್ನೈನ ಅನ್ಯಾ ರಾಧಾಕೃಷ್ಣನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಜು.9ರಂದು ಕೇಂದ್ರ ಗೃಹ ಸಚಿವಾಲಯದಿಂದ ಹೊರಡಿಸಲಾದ ಹೊಸ ಅಧಿಸೂಚನೆಯನ್ನು ಉಲ್ಲೇಖಿಸಿದರು. ಈ ಅಧಿಸೂಚನೆಯು ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಒಂದರ ನಂತರ ಒಂದರಂತೆ ಹಾಡಬೇಕೆಂದು ಕಡ್ಡಾಯಗೊಳಿಸುತ್ತದೆ ಹಾಗೂ ವಂದೇ ಮಾತರಂ ರಾಷ್ಟ್ರಗೀತೆಯ ಮುಂಚಿತವಾಗಿ ಬರಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಈ ಅಧಿಸೂಚನೆಯು ರಾಜ್ಯ ಗೀತೆಗಳ ಬಗ್ಗೆ ಏನನ್ನೂ ಹೇಳಿಲ್ಲ ಮತ್ತು ರಾಜ್ಯ ಗೀತೆಯನ್ನು ಕೊನೆಯಲ್ಲಿ ಹಾಡಬೇಕು ಎಂದು ಸೂಚಿಸಿಲ್ಲ ಎಂದು ವಾದ ಮಂಡಿಸಿದರು.