ಬೆಂಗಳೂರು, ಆ. 19 (DaijiworldNews/AK): ತಿಪಟೂರು ಕ್ಷೇತ್ರದ ಮಾಜಿ ಶಾಸಕ ಮತ್ತು ರಾಜ್ಯದ ಮಾಜಿ ಶಿಕ್ಷಣ ಸಚಿವರೂ ಆದ ಬಿ.ಸಿ.ನಾಗೇಶ್ (65 ವರ್ಷ) ಅವರು ಸಚಿವರಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುವ ಮತ್ತು ಸ್ನೇಹ ಸ್ವಭಾವ ಅವರದಾಗಿತ್ತು. ಅವರ ಅಗಲುವಿಕೆ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು. ಅವರ ಇಡೀ ಕುಟುಂಬವೇ ಸಮಾಜಕ್ಕೆ ಸೇವೆಗೆ ಮುಡಿಪಾಗಿದೆ ಎಂದು ನೆನಪಿಸಿದರು.
ಅನೇಕ ಶಾಲೆಗಳಿಗೆ ಕಾಯಕಲ್ಪ- ಆರ್.ಅಶೋಕ್
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ನಾಗೇಶ್ ಅವರು ಅತ್ಯಂತ ಸರಳಜೀವಿ ಎಂದು ತಿಳಿಸಿದರು. ಸಚಿವರಾಗಿದ್ದಾಗ ಅನೇಕ ಶಾಲೆಗಳಿಗೆ ಕಾಯಕಲ್ಪ ಕೊಟ್ಟವರು ಎಂದು ತಿಳಿಸಿದರು. ಭಾರತೀಯತೆ, ದೇಶಭಕ್ತಿಯ ವಿಚಾರಗಳನ್ನು ಪ್ರಖರವಾಗಿ ತಿಳಿಸಿದ್ದರು ಎಂದರು.
ಸೌಮ್ಯ ಸ್ವಭಾವದ, ಜನರನ್ನು ಪ್ರೀತಿಸುವ ವ್ಯಕ್ತಿತ್ವ- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬಿ.ಸಿ.ನಾಗೇಶ್ ಅವರು ಸೌಮ್ಯ ಸ್ವಭಾವದ, ಜನರನ್ನು ಪ್ರೀತಿಸುವ, ಯಾರನ್ನೂ ನೋಯಿಸಲಾರದ ಒಂದು ವ್ಯಕ್ತಿತ್ವವನ್ನು ಹೊಂದಿದ್ದರು. ಆರೆಸ್ಸೆಸ್ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಿಂದಲೂ ಹೋರಾಟವನ್ನು ಮೈಗೂಡಿಸಿಕೊಂಡಿದ್ದರು. ಇಡೀ ತಮ್ಮ ಜೀವನವನ್ನೇ ಜನರಿಗಾಗಿ ಮುಡಿಪಾಗಿ ಇಟ್ಟಿದ್ದರು ಎಂದು ಸ್ಮರಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮ- ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನಾಗೇಶರದು ಕ್ರಿಯಾಶೀಲ ವ್ಯಕ್ತಿತ್ವ ಎಂದು ವಿವರಿಸಿದರು. ಅವರು ತಿಪಟೂರು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸಿದ್ದರು ಎಂದು ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು ಎಂದರು.