ನವದೆಹಲಿ, ಆ. 18 (DaijiworldNews/AK): ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ತಿರುವು ಸಿಕ್ಕಿದ್ದು, ಪ್ರಕರಣದ ಎರಡನೇ ಆರೋಪಿ (A2) ಶಿವಕುಮಾರ್ ಸಲ್ಲಿಸಿದ್ದ ‘ಮಾಫಿ ಸಾಕ್ಷಿ’ ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಜಾಗೊಳಿಸಿದೆ.

ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿ ಎ2 ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ತೀವ್ರವಾಗಿ ವಿರೋಧಿಸಿದ್ದ ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಮಹತ್ವದ ಆದೇಶ ನೀಡಿದೆ.
ಎ2 ಶಿವಕುಮಾರ್ ಕೇವಲ ಸಂತ್ರಸ್ತನಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಷ್ಟೇ ಭಾಗಿಯಾಗಿದ್ದಾನೆ. ಐಪಿಸಿ ಸೆಕ್ಷನ್ 377 ರ ಅಡಿಯ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಯ ಸಾಕ್ಷಿ ಈತನಲ್ಲ. ಆದ್ದರಿಂದ ಈತ ಪ್ರಕರಣದ ಕುರಿತು ಪ್ರತ್ಯಕ್ಷ ಅಥವಾ ಮಾಫಿ ಸಾಕ್ಷ್ಯ ನೀಡಲು ಸಾಧ್ಯವಿಲ್ಲ ಎಂದು ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಸುದೀರ್ಘ ವಾದ ಮಂಡಿಸಿದರು.
ಪ್ರಕರಣದ ಸ್ವಭಾವ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಶಿವಕುಮಾರ್ ಪ್ರತ್ಯಕ್ಷ ಭಾಗಿದಾರನಲ್ಲದಿರುವುದರಿಂದ ಆತನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು 42ನೇ ಎಸಿಜೆಎಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಜೂನ್ 22, 2024ರಂದು ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಯುವಕ ದೂರು ನೀಡಿದ್ದ. ಆರಂಭದಲ್ಲಿ ಹಾಸನ ಜಿಲ್ಲಾ ಪೊಲೀಸ್ ಠಾಣೆಗೆ ಆಗಮಿಸಿದ್ದ ಸಂತ್ರಸ್ತ, ನಂತರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿವಿಧ ಸೆಕ್ಷನ್ಗಳಡಿ ಅಧಿಕೃತ ಪ್ರಕರಣ ದಾಖಲಿಸಿದ. ಇದೇ ವೇಳೆ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವವರು ಸಂತ್ರಸ್ತನ ವಿರುದ್ಧವೇ ಪ್ರತಿ ದೂರು ನೀಡಿದ್ದರು.