ಶಿಮ್ಲಾ, ಆ. 18 (DaijiworldNews/AA): ಹಿಮಾಚಲ ಪ್ರದೇಶದಲ್ಲಿ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ಕ್ಯಾಡರ್ ಬಲವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆಗೆ ರಾಜ್ಯ ಸರ್ಕಾರ ಪತ್ರ ಬರೆದು ಮನವಿ ಮಾಡಿದೆ.

ರಾಜ್ಯದ ಪ್ರಸ್ತುತ 153 ಐಎಎಸ್ ಹುದ್ದೆಗಳನ್ನು 130ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದೇ ರೀತಿ ಐಎಫ್ಎಸ್ ಹುದ್ದೆಗಳನ್ನು 118ರಿಂದ 83ಕ್ಕೆ ಕಡಿತಗೊಳಿಸಲು ಹಾಗೂ ಐಪಿಎಸ್ ಕ್ಯಾಡರ್ನ್ನೂ 96 ಹುದ್ದೆಗಳಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
"ಅಧಿಕಾರಿಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿರಬಾರದು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವಷ್ಟು ಅಧಿಕಾರಿಗಳೇ ಸಾಕು. ವೈಯಕ್ತಿಕವಾಗಿ ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 100ರಿಂದ 110ರೊಳಗೆ ಇರಿಸುವುದು ತಮ್ಮ ಅಭಿಪ್ರಾಯವಾಗಿತ್ತು. ಆದರೆ ಕೆಲವು ಅಧಿಕಾರಿಗಳ ಅಸಮಾಧಾನದ ಹಿನ್ನೆಲೆ 130ಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.