ಬೆಂಗಳೂರು, ,ಆ. 18 (DaijiworldNews/AK): ಮಳೆ ಕೊರತೆಯಿಂದಾಗಿ ರಾಜ್ಯದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೂ ಬರ ಘೋಷಣೆ ಮಾಡದೇ, ಅನುದಾನ ಬಿಡುಗಡೆ ಮಾಡದೇ ಕೇವಲ ಹೇಳಿಕೆ ನೀಡುವುದರಲ್ಲೇ ಸರ್ಕಾರ ಮುಳುಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಆಶೋಕ್ ಅವರು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರದಿಂದಾಗಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳಿಗೆ ತೊಂದರೆಯಾಗಿದೆ. ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಮಳೆಯಾಗದೆ ತೀವ್ರ ಬರ ಬಂದಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಬರಕ್ಕೆ ಹಣ ಬಿಡುಗಡೆ ಮಾಡದೇ ಇದ್ದರೂ ನಾಳೆ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಹೇಳಿಕೆ ನೀಡಲಿದ್ದಾರಂತೆ. ಇದು ಯಾವ ಪುರುಷರ್ಥಕ್ಕೆ ಎಂದು ಪ್ರಶ್ನಿಸಿದರು.
ಸರ್ಕಾರ ಹಣ ಬಿಡುಗಡೆ ಮಾಡಿ, ಜಾನುವಾರುಗಳ ರಕ್ಷಣೆಗೆ ಗೋಶಾಲೆ ತೆರೆದು ಅನುಕೂಲ ಮಾಡಿಕೊಡಲಿ. ಈ ಎಲ್ಲವನ್ನೂ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಜೆಡಿಎಸ್ ಜೊತೆಗೆ ಮಾತುಕತೆ ನಡೆಸಿದ್ದೇವೆ. ಸಮನ್ವಯ ಸಮಿತಿಯಲ್ಲೂ ಚರ್ಚೆ ಮಾಡಿದ್ದೇವೆ. ಎಲ್ಲದರ ಚರ್ಚೆಯಾಗಬೇಕು. ಈ ಸರ್ಕಾರಕ್ಕೆ ಛೀಮಾರಿ ಹಾಕಲು ನಾವು ತಯಾರಿದ್ದೇವೆ ಎಂದರು.
ಬರಗಾಲದ ಬಗ್ಗೆ ಬಿಜೆಪಿ ಅಧ್ಯಯನ ತಂಡ ವರದಿ ನೀಡಿದೆ. ನಾನೂ ರಾಜ್ಯದಲ್ಲಿ ಪ್ರವಾಸ ಮಾಡಿ ಬರಗಾಲದ ಬಗ್ಗೆ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು. ಕಾವೇರಿ ವಿಚಾರವಾಗಿಯೂ ಈ ಸರ್ಕಾರದ ತಪ್ಪು ನಡೆಯಿಂದಾಗಿ ಸರಿಯಾಗಿ ವಾದ ಮಂಡನೆಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ನಿರಂತರ
ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಕಳಂಕಿತ ಮಂತ್ರಿ ಇಟ್ಟುಕೊಂಡು ಈ ಸರ್ಕಾರ ನಡೆಯಬಾರದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಚಾರ ನಡೆದು 187 ಕೋಟಿ ಲೂಟಿಯಾಗಿದೆ. ಅದನ್ನು ತಿಂದವರು ನಾಗೇಂದ್ರ. ಅವರನ್ನೇ ಮತ್ತೆ ಸಚಿವರನ್ನಾಗಿ ನೇಮಿಸಿದ್ದಾರೆ. ಭ್ರಷ್ಟ ಸರ್ಕಾರ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ನಾಗೇಂದ್ರ ಅವರನ್ನು ವಜಾ ಮಾಡುವವರೆಗೆ ಧರಣಿ ಮಾಡ್ತೇವೆ ಎಂದು ಎಚ್ಚರಿಸಿದರು.