ಬೆಂಗಳೂರು,ಆ. 05 (DaijiworldNews/AK): ನಾಗೇಂದ್ರ ಅವರ ಮೇಲೆ ಕೋರ್ಟಿನಲ್ಲಿ ಈಗಲೂ ದಾವೆ ಇದೆ. ಅವರು ದೆಹಲಿಗೂ ಹೋಗುವಂತಿಲ್ಲ. ಇಂಥ ಕಳಂಕಿತರು ಮಂತ್ರಿಮಂಡಲದಲ್ಲಿ ಇರಲು ಸಾಧ್ಯವಿಲ್ಲ. ಅವರು ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ” ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ನಮ್ಮ ಹೋರಾಟವನ್ನು ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ. 13ರಿಂದ ಸದನ ಪ್ರಾರಂಭವಾಗಲಿದೆ. ಅವರ ರಾಜೀನಾಮೆ ಇಲ್ಲದೇ ನಾವು ಸದನ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.
ಅವರು ಇವತ್ತೇ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಮೊನ್ನೆಯಷ್ಟೇ ರಾಜ್ಯ ಸರಕಾರದ ಸಂಪುಟ ವಿಸ್ತರಣೆ ಆಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ 2 ತಿಂಗಳ ಬಳಿಕ ವಿಸ್ತರಣೆ ಆಗಿದೆ ಎಂದರು. ಕಾಂಗ್ರೆಸ್ ಪಕ್ಷವು ಮಂತ್ರಿಮಂಡಲದ ಸದಸ್ಯತ್ವವನ್ನು ಹರಾಜಿಗೆ ಇಟ್ಟಿತ್ತು ಎಂದು ಮತ್ತೊಮ್ಮೆ ಆರೋಪಿಸಿದರು.
ಹರಾಜಿನಲ್ಲಿ ಸಚಿವಸ್ಥಾನವನ್ನು ಶಕ್ತ್ಯಾನುಸಾರ ಪಡೆದಿದ್ದಾರೆ ಎಂದ ಅವರು, ಇದಕ್ಕೆ ಪುರಾವೆ ಎಂಬಂತೆ ವಿಡಿಯೋಗಳು ಓಡಾಡುತ್ತಿವೆ ಎಂದು ವಿವರಿಸಿದರು. ಭ್ರಷ್ಟಾಚಾರ ಆರೋಪದಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣ ದುರುಪಯೋಗ ಪಡಿಸಿಕೊಂಡ ನಾಗೇಂದ್ರ ಅವರು ಬಿಜೆಪಿ ಮುಖಂಡರು, ಶಾಸಕರ ಬಹುದೊಡ್ಡ ಹೋರಾಟದ ಫಲವಾಗಿ ರಾಜೀನಾಮೆ ನೀಡಿದ್ದರು. ಜೈಲಿಗೆ ಹೋಗಿದ್ದರು. ಇವತ್ತಿಗೂ ಜಾಮೀನಿನಲ್ಲಿ ಇದ್ದಾರೆ. ಜಾಮೀನಿನಲ್ಲಿ ಇದ್ದರೂ, ಭ್ರಷ್ಟಾಚಾರದಲ್ಲಿದ್ದರೂ ಕಾಂಗ್ರೆಸ್ ಅವರಿಗೆ ಉಡುಗೊರೆಯಾಗಿ ಮಂತ್ರಿಸ್ಥಾನವನ್ನು ನೀಡಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಪ್ರದರ್ಶಿಸಿದರು .
ನಾಗೇಂದ್ರ ಅವರು ಮತ್ತೆ ಎಲ್ಲರ ಹೆಸರು ಹೇಳುವುದಾಗಿ ತಿಳಿಸಿದ್ದು, ಅವರಿಗೆ ಹೆದರಿ ಸಚಿವ ಸ್ಥಾನ ನೀಡಿರಬೇಕು ಎಂದು ತಿಳಿಸಿದರು. ಹೆಚ್ಚು ಹಣ ಕೊಟ್ಟದ್ದಕ್ಕಾಗಿ ಕೊಡಲಾಗಿದೆ ಎಂದು ಮತ್ತೊಬ್ಬರು ಹೇಳುತ್ತಾರೆ. ಒಟ್ಟಾರೆಯಾಗಿ ಸಚಿವ ಸ್ಥಾನಗಳನ್ನು ಹರಾಜಿಗೆ ಇಟ್ಟಿದ್ದು ಸಾಬೀತಾಗಿದೆ ಎಂದು ತಿಳಿಸಿದರು.