ಬೆಂಗಳೂರು, ಆ. 05 (DaijiworldNews/AK): ಈ ಸಚಿವ ಸಂಪುಟ ವಿಸ್ತರಣೆ ರಾಜ್ಯದ ಹಿತದೃಷ್ಟಿಯಿಂದ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರದ ಪೈ ಪೋಟಿ ಮತ್ತು ಹೈಕಮಾಂಡ್ನ ರಾಜಕೀಯ ಸಮೀಕರಣಗಳೇ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ” ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎರಡು ತಿಂಗಳ ನಂತರದಲ್ಲಿ ಸಚಿವಸಂಪುಟ ವಿಸ್ತರಣೆ ಮಾಡಿದ್ದಾರೆ. ರೇಟ್ ಫಿಕ್ಸ್ ಆಗದೇ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ನಾನು ಹಲವಾರು ಬಾರಿ ಈ ಹಿಂದೆ ಹೇಳಿದ್ದೇನೆ. ಒಂದೋ ಪೇಮೆಂಟ್ ಕೋಟದಲ್ಲಿ ಅಥವಾ ಮ್ಯಾನೇಜ್ಮೆಂಟ್ ಕೋಟದಡಿ ಸಚಿವಸಂಪುಟಕ್ಕೆ ಸೇರಬೇಕಿತ್ತು. ಎರಡು ಬಿಟ್ಟರೆ ಮೂರನೇ ಕೋಟಾ ಇರಲಿಲ್ಲ. ಕೆಲವರು ಪೇಮೆಂಟ್ ಕೋಟದಲ್ಲಿ ಹಾಗೂ ಇನ್ನೂ ಕೆಲವರು ಮ್ಯಾನೇಜ್ಮೆಂಟ್ ಕೋಟದಡಿ ಸಚಿವಸಂಪುಟಕ್ಕೆ ಸೇರಿದ್ದಾರೆ ಎಂದು ವಿಶ್ಲೇಷಿಸಿದರು.
ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಿದ್ದು ಯಾಕೆ?
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಹಾಗೂ ನ್ಯಾಯಾಂಗ ಪ್ರಕ್ರಿಯೆ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ವಿಜಯೇಂದ್ರ ಪ್ರಶ್ನಿಸಿದರು. ಭ್ರಷ್ಟಟಚಾರ ರಹಿತ ಆಡಳಿತದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನದೇ ನೈತಿಕತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಮರು ಸೇರ್ಪಡೆಗೆ ಹೈಕಮಾಂಡ್ ಭಯವೇ ಕಾರಣವೇ?
ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಹೈಕಮಾಂಡ್ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ನಾಗೇಂದ್ರ ಅವರು ಬೆದರಿಕೆ ಹಾಕಿದ ಬಳಿಕವೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಕಾಂಗ್ರೆಸ್ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವಸಂಪುಟ ವಿಸ್ತರಣೆ ಬಳಿಕ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರ ಹೇಳಿಕೆಯನ್ನು ತಾವು ಮತ್ತೊಮ್ಮೆ ಗಮನಿಸಬೇಕಾಗುತ್ತದೆ. ಹಿರಿಯ ಶಾಸಕ ತನ್ವೀರ್ ಸೇಠ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೂ ಸಚಿವ ಸ್ಥಾನ ಸಿಕ್ಕಿದೆ ಎಂದಿದ್ದಾರೆ.