ಮುಂಬೈ, ಆ. 05 (DaijiworldNews/AA): ಕಾಕ್ರೋಚ್ ಜನತಾ ಪಾರ್ಟಿ ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಸಿಜೆಪಿಯ ಪ್ರಮುಖ ಕಾರ್ಯತಂತ್ರದ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವ ಯಾವುದೇ ಉದ್ದೇಶವಿಲ್ಲ. ಬದಲಾಗಿ ದೇಶದ ಜನರ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರುವ ಒತ್ತಡದ ಗುಂಪು ಆಗಿ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟನೆ ನೀಡಿದರು.
"ದೇಶಕ್ಕೆ ಪ್ರಸ್ತುತ ರಾಜಕೀಯ ಪಕ್ಷಕ್ಕಿಂತ ಜನರ ಧ್ವನಿಯನ್ನು ಎತ್ತುವ ಒತ್ತಡದ ಗುಂಪಿನ ಅಗತ್ಯವಿದೆ. ಸದ್ಯಕ್ಕೆ ಸಿಜೆಪಿ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸಲಿದೆ. ಈಗ ಭಾರತಕ್ಕೆ ಬೇಕಾಗಿರುವುದು ಒತ್ತಡದ ಗುಂಪು, ರಾಜಕೀಯ ಪಕ್ಷವಲ್ಲ" ಎಂದರು.
ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, "ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಈ ಚಳವಳಿಯ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದು, ಪ್ರಮುಖ ವಿಚಾರಗಳಲ್ಲಿ ಅವರ ಸಲಹೆ ಪಡೆಯಲಾಗುವುದು. ಇತ್ತೀಚೆಗೆ ಸಿಜೆಪಿ ನೇತೃತ್ವದಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಕುರಿತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದರು.