ತಮಿಳುನಾಡು, ಆ. 05 (DaijiworldNews/AK): ಮನೆಯಲ್ಲಿಯೇ ಇದ್ದು, ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮೂಲಗಳಿಂದ ಅಧ್ಯಯನ ಸಾಮಗ್ರಿ ಸಂಗ್ರಹಿಸಿ ಸ್ಪಷ್ಟ ಗುರಿಯೊಂದಿಗೆ ಪರಿಶ್ರಮಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವುದಕ್ಕೆ ಐಎಎಸ್ ಅಧಿಕಾರಿ ಎಂ. ಪ್ರಿಯಾಂಗಾ ಅವರೇ ಸಾಕ್ಷಿ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಪ್ರಿಯಾಂಗಾ ಅವರು ಮೂಲತಃ ತಮಿಳುನಾಡಿನ ವೆಲ್ಲೂರು ಜಿಲ್ಲೆಯವರು. ತಂದೆ ವಿದ್ಯುತ್ ಇಲಾಖೆಯಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ನಿವೃತ್ತರಾಗಿದ್ದು, ತಾಯಿ ಗೃಹಿಣಿ. ಪಿಯುಸಿವರೆಗೂ ಸರ್ಕಾರಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ಇವರು, 10ನೇ ತರಗತಿಯಲ್ಲಿ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದಿದ್ದು, 12ನೇ ತರಗತಿಯಲ್ಲಿ 95% ಅಂಕ ಗಳಿಸಿದ್ದಾರೆ. ಸೇಲಂನ ಸರ್ಕಾರಿ ಕಾಲೇಜ್ನಲ್ಲಿ ಬಿಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ನಲ್ಲಿ ಪದವಿ ಪಡೆದಿದ್ದಾರೆ.
ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು 2012ರಿಂದ ಯುಪಿಎಸ್ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಪ್ರಾರಂಭಿಸಿದರು. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಕ್ಲಿಯರ್ ಆಯಿತು. ಆದರೆ ಮೇನ್ಸ್ ಕ್ಲಿಯರ್ ಆಗಲಿಲ್ಲ. 3ನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಸಹ ಪಾಸಾಗಲಿಲ್ಲ. ಹಾಗೆಂದು ಪ್ರಯತ್ನ ಬಿಡಲಿಲ್ಲ. ಯಶಸ್ಸಿಗಾಗಿ ಮರಳಿ ಯತ್ನವ ಮಾಡು ಎಂಬ ಮಾತಿನಂತೆ 4ನೇ ಪ್ರಯತ್ನದಲ್ಲಿ 149ನೇ ರ್ಯಾಂಕ್ ಗಳಿಸಿದರು.
ಕೇಂದ್ರ ಸರ್ಕಾರದ ಶಾರ್ಟ್ ಸರ್ವೀಸ್ ಕಮಿಷನ್ (SSC) ಪರೀಕ್ಷೆಯಲ್ಲಿ ಪಾಸಾಗಿ 2015ರಲ್ಲಿ ಪೋಸ್ಟಲ್ ಅಸಿಸ್ಟಂಟ್ ಆಗಿ ಸೇರಿಕೊಂಡರು. ಕೆಲಸದ ಜತೆಗೆ ಪರೀಕ್ಷೆ ತಯಾರಿ ಮುಂದುವರೆಸಿದ್ದರಿಂದ ಯಾವುದೇ ಖಾಸಗಿ ಸಂಸ್ಥೆಗಳಿಂದ ಕೋಚಿಂಗ್ ತೆಗೆದುಕೊಳ್ಳಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಧ್ಯಯನ ಸಾಮಗ್ರಿ ಸಂಗ್ರಹಿಸಿ, ಸ್ವ-ಅಧ್ಯಾಯ ಮಾಡಿದರು. ಈ ಮೂಲಕ ಪ್ರಿಯಾಂಗಾ ಯಶಸ್ಸು ಪಡೆದರು.